State

ಚರಂಡಿಯನ್ನು ನದಿಯಾಗಿಸುವ ಸಾಹಸದ ಸಂಕಲ್ಪ!

ನೀರಿನ ಕುರಿತಂತೆ ನಾವು ಕಾಳಜಿ ವಹಿಸಿರೋದು ಕಡಿಮೆಯೇ. ನಾಗರೀಕತೆ, ಸುಸಂಸ್ಕೃತಿ ಇವುಗಳೆಲ್ಲದರ ತೊಟ್ಟಿಲು ನದಿ ತೀರ ಎಂಬುದು ಗೊತ್ತಿದ್ದಾಗಲೂ ನಾವು ಅದನ್ನು ಕಡೆಗಣಿಸುತ್ತಿರುವುದು ಆಶ್ಚರ್ಯಕರ ಸಂಗತಿ. ಹಾಗಂತ ಇದು ಭಾರತದ ಹುಟ್ಟಿನಿಂದಲೂ ಇರುವ ಅವಗಣನೆ ಏನಲ್ಲ. ಹಾಗೆ ನೀರನ್ನು ಕಡೆಗಣಿಸಿ ಸುದೀರ್ಘಕಾಲ ಬದುಕಿದವರೂ ಇಲ್ಲ ಬಿಡಿ. ನಮ್ಮ ಇಡಿಯ ನಾಗರೀಕತೆ ಸಭ್ಯವೆಂದು ಕರೆಸಿಕೊಳ್ಳಲು ಮತ್ತು ಜಗದ್ವ್ಯಾಪಿಯಾಗಿ ಹರಡಿ ನಿಲ್ಲಲು ಕಾರಣವಾಗಿದ್ದೇ ನೀರಿನ ಕುರಿತಂತೆ ನಾವಿಟ್ಟುಕೊಂಡಿದ್ದ ಗೌರವ ಮತ್ತು ಕಾಳಜಿಗಳು. ಹರಪ್ಪ, ಮೆಹೆಂಜೊದಾರೊ ಅವಶೇಷಗಳಲ್ಲಿ ನೀರನ್ನು ಶೇಖರಿಸಲು ಮತ್ತು ಅದನ್ನು ಮಿತವಾಗಿ ಬಳಸಲು ರೂಪಿಸಿಕೊಂಡಿದ್ದ ಯೋಜನೆಗಳನ್ನು ನೋಡಿದರೂ ಅಚ್ಚರಿ ಎನಿಸದೇ ಇರದು. ಆನಂತರದ ದಿನಗಳಲ್ಲೂ ತಟಾಕಗಳಿಗೆ, ಕಲ್ಯಾಣಿಗಳಿಗೆ, ಕೆರೆಗಳಿಗೆ, ಬಾವಿಗಳಿಗೆ, ಕೊಳಗಳಿಗೆ ನಾವು ಕೊಟ್ಟ ಗೌರವದ ಕಾರಣದಿಂದಾಗಿಯೇ ಇಲ್ಲಿ ನದಿಗಳೆಲ್ಲ ಸೊಂಪಾಗಿ ಹರಿದು ಜನಮಾನಸಕ್ಕೆ ಪೂರಕವಾಗಿ ನಿಂತಿತು. ನದಿ ನಮ್ಮ ಪುರಾಣಗಳನ್ನು ಹೊಕ್ಕಿತು, ಗರ್ಭಗುಡಿಯಲ್ಲಿ ಸ್ಥಾನ ಪಡೆಯಿತು, ಕೊನೆಗೆ ತಾಯಿಯ ರೂಪದಲ್ಲಿ ಗೌರವಿಸಲ್ಪಡುವ ಸ್ಥಾನಕ್ಕೂ ಏರಿಬಿಟ್ಟಿತು. ಹಾಗೆ ನದಿಯೊಂದರಲ್ಲಿ ಕಾಲಿಡುವ ಮುನ್ನ ಅದಕ್ಕೆ ನಮಸ್ಕರಿಸುವ ಪದ್ಧತಿ ಬಹುಶಃ ಜಗತ್ತಿನಲ್ಲಿ ಮತ್ತೆಲ್ಲೂ ಇರಲಿಕ್ಕಿಲ್ಲವೇನೋ. ನದಿಯೊಳಗೆ ಸ್ನಾನ ಮಾಡುವಾಗ ಪೂರ್ಣ ನಗ್ನವಾಗುವಂತಿಲ್ಲ ಎಂಬ ನಿಯಮವೇ ಇರುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅದು ದೇವನದಿಯನ್ನು ಗೌರವಿಸುವ ಪರಿಯಂತೆ!


ನದಿಯೊಂದರ ಕುರಿತಂತೆ ಇಷ್ಟೆಲ್ಲಾ ಪೂಜ್ಯ ಭಾವನೆ ಹೊಂದಿದ್ದ ಭಾರತದಲ್ಲಿ ಇಂದು ಗಂಗೆಯೂ ಸೇರಿದಂತೆ ಅನೇಕ ಪ್ರಮುಖ ನದಿಗಳು ದುಃಖವೆನಿಸುವ ಸ್ಥಿತಿ ತಲುಪಿದ್ದೇಕೆ? ನಮ್ಮೆಲ್ಲ ನದಿಗಳು ಕಣ್ಣೀರ್ಗರೆಯುವಂತಾಗಲು ಕಾರಣವೇನು ಎಂಬ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳಲೇಬೇಕು. ಅತೀ ಎನಿಸಿದರೂ ಸರಿಯೇ ಈ ಎಲ್ಲಾ ಅಪಸವ್ಯಗಳ ಮೂಲವನ್ನು ನಾವು ಬ್ರಿಟೀಷರ ಕಾಲದ ಭಾರತದಲ್ಲಿಯೇ ಹುಡುಕಾಡಬೇಕು. ಈ ದೇಶವನ್ನು ಭೋಗದ ವಸ್ತುವಾಗಿ ಕಂಡ ಬ್ರಿಟೀಷರು ಇಲ್ಲಿರುವ ಸಂಪತ್ತನ್ನೆಲ್ಲಾ ಸೂರೆಗೈದು ಇದನ್ನು ನಾಶಮಾಡಿಬಿಡಬೇಕೆಂದೇ ಆಲೋಚಿಸಿದ್ದರೇನೋ! ಖನಿಜ ಸಂಪತ್ತು ನಾಶಗೈದರು, ಕಾಡನ್ನು ಕಡಿ-ಕಡಿದು ಸಾಗಿಸಿದರು, ಕೊನೆಗೆ ತಮ್ಮ ಈ ಲೂಟಿಯ ಕೆಲಸಗಳಿಗೆ ನದಿಯನ್ನೂ ಕೂಡ ಮಾರ್ಗವಾಗಿ ಬಳಸಿಬಿಟ್ಟರು. ಯಾವ ಕಾಡು ನಮ್ಮ ಪಾಲಿಗೆ ದೇವರಂತಿತ್ತೋ, ಅಲ್ಲಿನ ಮರವನ್ನು ಕಡಿದು ನದಿಯ ಮೂಲಕ ಮತ್ತೊಂದು ದಡಕ್ಕೋಯ್ದು, ಅಲ್ಲಿಯೇ ಟಿಂಬರ್ ಉದ್ದಿಮೆಯನ್ನು ಆರಂಭಿಸಿದವರು ಬ್ರಿಟೀಷರು. ಮರ ಮಾರಾಟದ ವಸ್ತುವಾಯ್ತು. ಅದನ್ನು ಕಡಿಯಲೆಂದು ಬ್ರಿಟೀಷರು ನೇಮಿಸಿಕೊಂಡ ಭಾರತೀಯ ಕಾಮರ್ಿಕರು ಭಾವನಾಶೂನ್ಯರಾದರು. ಬ್ರಿಟೀಷರು ಭಾರತವನ್ನು ಬಿಟ್ಟುಹೋಗಿದ್ದು ನಿಜವಾದರೂ ಅವರ ಜಾಗಕ್ಕೆ ಬಂದ ಇಂಗ್ಲೀಷ್ ಕಲಿತ ಬಲಿತ ಭಾರತೀಯರಿಗೆ ಭಾರತಕ್ಕಿಂತ ಹೆಚ್ಚು ಇಂಗ್ಲೆಂಡು ಆನಂದಮಯವಾಗಿ ಕಂಡುಬಂತು. ಅದರಂತೆ ಭಾರತವನ್ನು ರೂಪಿಸುವ ಭರದಲ್ಲಿ ತಮ್ಮದ್ದೇ ರಾಷ್ಟ್ರವನ್ನು ಲೂಟಿಗೈಯ್ಯಲಾರಂಭಿಸಿದರು. ಆ ಭರಾಟೆಯಲ್ಲೇ ಕಾಡೂ ನಾಶವಾಯ್ತು. ನದಿಗಳೂ ಲುಪ್ತಗೊಳ್ಳಲಾರಂಭಿಸಿದವು. ಹಾಗೆ ಕಣ್ಣೆದುರೇ ಇಲ್ಲವಾದ ನದಿಗಳಲ್ಲಿ ಬೆಂಗಳೂರಿನ ವೃಷಭಾವತಿಯೂ ಒಂದು. ಬಹುತೇಕರಿಗೆ ಬೆಂಗಳೂರಿನಲ್ಲಿ ಹೀಗೊಂದು ನದಿಯಿತ್ತು ಎಂಬ ಅರಿವೂ ಇಲ್ಲ!


ಬಸವನಗುಡಿಯ ದೊಡ್ಡ ಬಸವಣ್ಣನ ಪದತಲದಲ್ಲಿ ಹನಿ-ಹನಿಯಾಗಿ ಹುಟ್ಟುತ್ತಿದ್ದ ವೃಷಭಾವತಿ ಅಲ್ಲಿಯೇ ಹಿಂದಿರುವ ಕೆರೆಗೆ ಸೇರಿಕೊಳ್ಳುತ್ತಿದ್ದಳು. ಹಾಗೆ ಬಸವನ ಪಾದದ ಬುಡದಲ್ಲಿ ಹುಟ್ಟುವ ವೃಷಭಾವತಿಗೂ ಒಂದು ಐತಿಹ್ಯವಿದೆ. ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲೆಂದು ಬಂದ ಋಷಿ ಗೌತಮರಿಗೆ ಅಲ್ಲಿ ನೀರು ಕಾಣದೇ ಬೇಸರವಾಯಿತಂತೆ. ಆಗ ಶಿವನ ವಾಹನ ನಂದಿ ತಾನೇ ಸೃಷ್ಟಿಸಿಕೊಟ್ಟ ಜಲಧಾರೆ ವೃಷಭಾವತಿ ಎನ್ನಿಸಿಕೊಂಡಿತಂತೆ. ವೃಷಭ ಬಸವಣ್ಣನೇ ಆಗಿರುವುದರಿಂದ ಈ ಇಡಿಯ ಭಾಗ ಬಸವನಗುಡಿ ಎಂದು ಕರೆಯಲ್ಪಟ್ಟಿತು, ನದಿಗೂ ಕೂಡ ಅದೇ ಹೆಸರು ಸಾರ್ಥಕವಾಯ್ತು. ಹೀಗೆ ಬಸವಣ್ಣನ ಪಾದದ ಬುಡದಲ್ಲಿ ಹುಟ್ಟುವ ವೃಷಭಾವತಿಯ ಇನ್ನೊಂದು ತೊರೆ ಗವಿಗಂಗಾಧರೇಶ್ವರನ ಮಂದಿರದವರೆಗೂ ಸಾಗುತ್ತದೆ ಎಂದು ಐತಿಹಾಸಿಕ ವಿಚಾರಗಳಲ್ಲಿ ತಜ್ಞರಾದ ಸುರೇಶ್ ಮೂನ ಅಭಿಪ್ರಾಯ ಪಡುತ್ತಾರೆ. ಬಸವಣ್ಣನ ಕೆರೆಯಿಂದ ಧುಮ್ಮಿಕ್ಕುತ್ತಿದ್ದ ವೃಷಭಾವತಿ ಮುಂದೆ ತ್ಯಾಗರಾಜನಗರವನ್ನು ದಾಟಿಕೊಂಡು ಹೊಸಕೆರೆ ಹಳ್ಳಿಯ ಮೂಲಕ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದೆಡೆಗೆ ಸಾಗುತ್ತಿತ್ತಂತೆ. ಅಲ್ಲಿ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹುಟ್ಟಿ ಹರಿದು ಬರುವ ಮತ್ತೊಂದು ಧಾರೆಯೊಂದಿಗೆ ಸೇರಿಕೊಳ್ಳುತ್ತಿತ್ತು. ಹೀಗಾಗಿ ಆಂಜನೇಯ ಸ್ವಾಮಿ ದೇವಾಲಯ ಸಂಗಮ ಕ್ಷೇತ್ರದಲ್ಲಿದೆ ಎಂದು ಅನೇಕರು ಹೇಳುತ್ತಾರೆ. ಅಷ್ಟೇ ಅಲ್ಲ, ಎರಡೂ ಧಾರೆಗಳು ಒಂದಾಗಿ ಇಲ್ಲಿಂದ ಪಶ್ಚಿಮಕ್ಕೆ ಹರಿಯುತ್ತದಾದ್ದರಿಂದ ಶ್ರೀರಂಗಪಟ್ಟಣದಂತೆ ಇದೂ ಪಶ್ಚಿಮವಾಹಿನಿಯೇ. ನಾಲ್ಕೈದು ದಶಕಗಳ ಹಿಂದೆಯೂ ವೃಷಭಾವತಿ ಅದೆಷ್ಟು ಶುದ್ಧವಾಗಿದ್ದಳೆಂದರೆ ಆಂಜನೇಯ ದೇವಸ್ಥಾನದ ಅರ್ಚಕರು ಈ ನದಿಯಲ್ಲಿ ಸ್ನಾನ ಮಾಡಿಯೇ ದೇವರ ಪೂಜೆಗೆ ಬರುತ್ತಿದ್ದರಂತೆ. ಈ ನದಿಯ ನೀರಿನಿಂದಲೇ ಆಂಜನೇಯನಿಗೆ ಅಭಿಷೇಕವನ್ನೂ ಮಾಡಲಾಗುತ್ತಿತ್ತು. ಅಲ್ಲೇ ಎದುರಿಗಿರುವ ಶಾಲೆಯ ಮಕ್ಕಳು ಈ ನದಿಯಲ್ಲಿ ಬಂದು ಸ್ನಾನ ಮಾಡಿ ಆಟವಾಡುತ್ತಿದ್ದುದನ್ನು ಅನೇಕರು ನೆನಪಿಸಿಕೊಳ್ಳುತ್ತಾರೆ. ರಾಜ್ಕುಮಾರ್ ಸಿನಿಮಾಗಳಲ್ಲನೇಕವು ಇಲ್ಲಿಯೇ ಚಿತ್ರೀಕರಣಗೊಂಡಿದ್ದು. ಇದನ್ನು ರಾಜ್ಕುಮಾರ್ ಕಾಲುವೆ ಎಂದೂ ಕರೆಯುತ್ತಿದ್ದರಂತೆ! ಬೆಂಗಳೂರು ಬೆಳೆಯುತ್ತಾ ಹೋಯ್ತು. ಒಂದೊಂದಾಗಿ ಎಲ್ಲವೂ ಕಾಣೆಯಾಗುತ್ತಾ ಹೋಯ್ತು. ಮೊದಲಿಗೆ ನದಿಗೆ ಹೊಂದಿಕೊಂಡಿದ್ದ ಕಾಡು ಧ್ವಂಸಗೊಂಡಿತು. ಇಲ್ಲಿದ್ದ ಕಾಡು ಸಾಮಾನ್ಯವಾದ್ದಲ್ಲ. ಮೈಸೂರು ರಸ್ತೆಯ ಒಂದು ಭಾಗವನ್ನು ಬ್ಯಾಟರಾಯನಪುರ ಎನ್ನಲಾಗುತ್ತದೆ. ಅದರ ನಿಜಸ್ವರೂಪ ಏನು ಗೊತ್ತೇ? ಬೇಟೆರಾಯನಪುರ ಅಂತ. ಕೃಷ್ಣ ಬೇಟೆಯಾಡಲು ಬಂದು ಇಲ್ಲಿ ನೆಲೆಸಿದ್ದ ಎಂದು ನಂಬಲಾಗುತ್ತದೆ. ಅಂತಹ ಕಾಡು ಕಾಲ ಕಳೆದಂತೆ ನಾಶಗೊಂಡು ಸಾಲು-ಸಾಲು ಕಟ್ಟಡಗಳು ನಿಮರ್ಾಣಗೊಂಡವು. ನಿಧಾನವಾಗಿ ನದಿಗೆ ಪೂರಕವಾಗಿದ್ದ ಜಲತಟಾಕಗಳು ಮುಚ್ಚಲ್ಪಟ್ಟವು. ರಾಜಕಾರಣಿಗಳು ಕೆರೆಗಳನ್ನೇ ನುಂಗಿ ನೀರುಕುಡಿದರು. ಕೆರೆಗಳಿಗೆ ನೀರು ತರಬೇಕಿದ್ದ ರಾಜಕಾಲುವೆಗಳ ಮೇಲೆ ಸಿರಿವಂತರು ಮನೆ ಕಟ್ಟಿಕೊಂಡರು. ಇಷ್ಟು ಸಾಲದೆಂದು ಬೆಳೆಯುತ್ತಿದ್ದ ಬೆಂಗಳೂರಿನ ಕೊಳಕನ್ನು ವೃಷಭಾವತಿಯ ಒಡಲಿಗೆ ಬಿಟ್ಟು ಎಲ್ಲರೂ ನಿರಾಳರಾಗಿಬಿಟ್ಟರು. ನೋಡನೋಡುತ್ತಲೇ ಹಾಲಿನಂತೆ ಹರಿಯುತ್ತಿದ್ದ ವೃಷಭಾವತಿ ಅಕ್ಷರಶಃ ಚರಂಡಿಯಾಗಿಬಿಟ್ಟಿದ್ದಾಳೆ. ಅನೇಕ ಕಡೆಗಳಲ್ಲಿ ವೃಷಭಾವತಿಯ ಪಾತ್ರವನ್ನೇ ಒಳಚರಂಡಿಯಾಗಿಸಿಕೊಂಡುಬಿಟ್ಟಿತು ಸಕರ್ಾರ. ಆನಂತರ ಜನ ನದಿಯನ್ನು ಮರೆತರು. ಕೊಳಕು ವಾಸನೆಯೊಂದಿಗೆ ಹೊಂದಿಕೊಂಡರು. ಈ ಕಾಲಘಟ್ಟದಲ್ಲಿ ವೃಷಭಾವತಿ ನದಿ ಕೆಂಗೇರಿ ಮೋರಿ ಎಂದು ಬದಲಾದದ್ದು ಯಾರ ಗಮನಕ್ಕೂ ಬರಲೇ ಇಲ್ಲ. ಇಲ್ಲಿಂದ ಮುಂದೆ ಪಿಣ್ಯದ ಕೈಗಾರಿಕೆಗಳಿಂದ ಹೊರಚೆಲ್ಲುವ ಭಾರ ಲೋಹಯುಕ್ತ ವಿಷವನ್ನು ಸೇರಿಸಿಕೊಂಡೇ ನದಿ ಹರಿಯಿತು. ಅದನ್ನು ಸ್ವಚ್ಛಗೊಳಿಸಲೆಂದು ಕೆಂಗೇರಿಯಲ್ಲಿ ಕೊಳಚೆ ಶುದ್ಧೀಕರಣ ಘಟಕಗಳು ತಲೆಯೆತ್ತಿದವೇನೋ ನಿಜ, ಆದರೆ ಅವುಗಳು ಸರಿಯಾಗಿ ಕಾರ್ಯನಿರ್ವಹಿಸದೇ ನೀರು ಮಾತ್ರ ಕೊಳಕಾಗಿಯೇ ಹರಿಯಲಾರಂಭಿಸಿತು. ಅಲ್ಲಿಂದ ಮುಂದೆ ಬೈರಮಂಗಲದ ನೀರು ಸಂಗ್ರಹಣಾ ಘಟಕಕ್ಕೆ ಸೇರುವ ವೇಳೆಗೆ ವೃಷಭಾವತಿ ಅಕ್ಷರಶಃ ವಿಷಭಾವತಿಯೇ ಆಗಿಹೋಯ್ತು! ಈಗೇನಾದರೂ ನೀವು ಬೈರಮಂಗಲದ ಬಳಿ ಹೋಗಿ ನಿಂತರೆ ಹಾಲಿನ ಬಣ್ಣ ನೀರಿಗೆ ಬಂದಿರೋದು ನಿಜವೆನಿಸುತ್ತದೆ. ಆದರೆ ಇದು ಶುದ್ಧತೆಯ ಸಂಕೇತವಾಗಿ ಅಲ್ಲ, ಬದಲಾಗಿ ವೃಷಭಾವತಿಯೊಳಗೆ ಅಡಗಿರುವ ಕೊಳಕಿನ ಕಾರಣದಿಂದಾಗಿ. ಇದೇ ನೀರನ್ನು ಅಲ್ಲಿನ ರೈತರು ತಮ್ಮ ತೋಟಗಳಿಗೆ ಬಳಸುತ್ತಾರೆ. ಅಲ್ಲಿ ಬೆಳೆದ ತರಕಾರಿ, ಎಳನೀರು, ಜೋಳ, ಅಲ್ಲಿನ ಮೇವುಂಡು ಕೊಟ್ಟ ಹಸುವಿನ ಹಾಲು ಇವೆಲ್ಲವೂ ಬರುವುದು ಬೆಂಗಳೂರು ನಗರಕ್ಕೇ. ಯಾವ ವಿಷವನ್ನು ನದಿಗೆ ಮುಲಾಜಿಲ್ಲದೇ ನಾವು ಉಣ್ಣಿಸಿದೆವೋ ಆ ವಿಷ ಮರಳಿ ನಮ್ಮನ್ನೇ ಆವರಿಸಿಕೊಳ್ಳುತ್ತಿದೆ. ಬೆಂಗಳೂರಿನ ಜನ ಬಲುಬೇಗ ಮಾರಕ ರೋಗಗಳಿಗೆ ತುತ್ತಾಗುತ್ತಿರುವುದಕ್ಕೆ ಇದೂ ಒಂದು ಕಾರಣ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇವುಗಳ ಅರಿವಿದ್ದಾಗ್ಯೂ ನಾವು ಮತ್ತೆ ಮತ್ತೆ ನದಿಯ ಶೋಷಣೆ ಮಾಡುತ್ತಾ ಸುಖವಾಗಿದ್ದೇವೆಂಬ ಕನಸು ಕಾಣುತ್ತಿದ್ದೇವಲ್ಲ, ಅದೇ ದುರಂತ. ಅದಾಗಲೇ ಬೆಂಗಳೂರು ಬದುಕಲು ಯೋಗ್ಯವಲ್ಲದ ನಗರಗಳ ಪಟ್ಟಿಗೆ ವೇಗವಾಗಿ ಸೇರ್ಪಡೆಯಾಗುತ್ತಿದೆ. ಇನ್ನೂ ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಬರಲಿರುವ ದಿನಗಳು ಕಠೋರವಾಗಿರುವುದರಲ್ಲಿ ಅನುಮಾನವೇ ಇಲ್ಲ. ಈ ಕಾರಣಕ್ಕಾಗಿಯೇ ಸಪ್ಟೆಂಬರ್ 22ರಂದು ವೃಷಭಾವತಿಯನ್ನು ಉಳಿಸಲೆಂದು ಓಟ ಹಮ್ಮಿಕೊಂಡಿರೋದು. ಕೆಂಗೇರಿಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ಸುಮಾರು 10,000 ಜನ ನದಿಯನ್ನು ಉಳಿಸುವ ಸಂಕಲ್ಪ ಹೊತ್ತು ಓಡುತ್ತಿದ್ದಾರೆ. ನದಿ ಉಳಿಯಬೇಕೆಂಬ ಕನಸು ಹೊತ್ತ ಹತ್ತಾರು ಸಂಘಟನೆಗಳು ಜೊತೆಯಾಗಿ ನಿಂತು ಈ ಜನಜಾಗೃತಿಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿವೆ. ಹಾಗಂತ ಓಟದಿಂದ ನದಿ ಪುನರುಜ್ಜೀವನಗೊಂಡುಬಿಡುವುದಿಲ್ಲ. ಓಟ ಜಾಗೃತಿಗಾಗಿ ಮಾಡುವ ಪ್ರಯತ್ನ ಅಷ್ಟೇ. ಅಲ್ಲಿಂದಾಚೆಗೆ ನದಿಗೆ ಜೀವ ತುಂಬುವ ಕಸರತ್ತು ನಾಲ್ಕು ಹಂತಗಳಲ್ಲಿ ಆರಂಭವಾಗುತ್ತವೆ. ಈ ನದಿಯ ಕುರಿತಂತೆ ದಾಖಲೆಗಳನ್ನು ಕಲೆಹಾಕುವ ಬೌದ್ಧಿಕ ಕ್ಷತ್ರಿಯರ ತಂಡ ಕೆಲಸಮಾಡಬೇಕಿದೆ. ಅದರೊಟ್ಟಿಗೆ ಸಮಾಜವನ್ನು ಪ್ರಭಾವಿಸಬಲ್ಲ ಸೆಲೆಬ್ರಿಟಿಗಳೂ ಕೂಡ ಮುಂಚೂಣಿಗೆ ಬರುವಂತೆ ಮಾಡಬೇಕಿದೆ. ಎರಡನೇ ಹಂತದಲ್ಲಿ ಕೋಟರ್ಿನಲ್ಲಿ ಅನವಶ್ಯಕವಾಗಿ ಕೆರೆಯನ್ನು ಲಪಟಾಯಿಸುವವರ ವಿರುದ್ಧ, ಕೇಸುಹಾಕಿ ಕುಳಿತವರ ವಿರುದ್ಧ ನಿರ್ಲಕ್ಷ್ಯ ತೋರಿ ತಮ್ಮ ತೆರಿಗೆಯ ಹಣದಲ್ಲಿ ಕೊಬ್ಬಿ ಮೆರೆಯುತ್ತಿರುವ ಅಧಿಕಾರಿಗಳ ವಿರುದ್ಧ ಗುಟುರು ಹಾಕಬಲ್ಲ ವಕೀಲರ ಪಡೆಯನ್ನು ನಿಮರ್ಿಸಬೇಕಿದೆ. ಜೊತೆಗೆ ಹೊರಬರಲಾಗದೇ ಕುಳಿತಲ್ಲೇ ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರನಾಯಕರನ್ನು ಪ್ರಭಾವಿಸಬಲ್ಲ ಕೀಬೋಡರ್್ ಸೈನಿಕರ ಪಡೆ ನಿಮರ್ಾಣವಾಗಬೇಕಿದೆ. ಮೂರನೇ ಹಂತದಲ್ಲಿ ಮನೆಯನ್ನು ಕಸಮುಕ್ತಗೊಳಿಸಿಕೊಳ್ಳುವುದರಿಂದ ಶುರುಮಾಡಿ, ಅಪಾಟರ್್ಮೆಂಟು, ವಾಡರ್ುಗಳವರೆಗೂ ಕಸರಹಿತ ಪ್ರದೇಶಗಳ ನಿಮರ್ಾಣಕ್ಕಾಗಿ ಜಾಗೃತಿಯ ಜಾಥಾಗಳನ್ನು ರೂಪಿಸಬೇಕಿದೆ. ಇವೆಲ್ಲವೂ ನಡೆಯುತ್ತಿರುವಾಗಲೇ ನದಿಯನ್ನು ಹರಿವಿನ ಮೇಲ್ಭಾಗದಲ್ಲಿ ಸ್ವಚ್ಛಗೊಳಿಸುವ ಕೆಲಸ ಆರಂಭವಾಗಬೇಕಿದೆ. ಕೆಲವು ಒಂದು ತಿಂಗಳಲ್ಲಿ ಮುಗಿಯುವಂಥವು, ಇನ್ನೂ ಕೆಲವಕ್ಕೆ ವರ್ಷಗಳೇ ಬೇಕಾಗಬಹುದು. ಬೆಂಗಳೂರಿನ ಮೇಲೆ ಪ್ರೀತಿ ಮತ್ತು ಕೆಲಸ ಮಾಡಬೇಕೆಂಬ ನಿಶ್ಚಯಾತ್ಮಕ ಬುದ್ಧಿ ಇಷ್ಟಿದ್ದರೆ ಯಾವುದೂ ಕಷ್ಟವಲ್ಲ. ಎಲ್ಲಕ್ಕೂ ಮೊದಲ ಹಂತ ಬರಲಿರುವ ವೃಷಭಾವತಿಗಾಗಿ ಓಟ. ನಮ್ಮ ಹಿಂದಿನ ಪೀಳಿಗೆ ವೃಷಭಾವತಿಯನ್ನು ಚರಂಡಿಯಾಗಿಸಿತು. ನಾವೀಗ ಆ ಚರಂಡಿಯನ್ನು ಶುದ್ಧನೀರು ಹರಿಯುವ ನದಿಯಾಗಿ ಮರುರೂಪಿಸೋಣ.

ಈ ಕೆಲಸ ಅಸಾಧ್ಯವೆಂದು ಕನಸಿನಲ್ಲೂ ಅಂದುಕೊಳ್ಳಬೇಡಿ. ಆರೇಳು ದಶಕಗಳ ಹಿಂದೆ ಇದಕ್ಕಿಂತಲೂ ಕೆಟ್ಟು, ಕೊಳೆತು ನಾರುತ್ತಿದ್ದ ಥೇಮ್ಸ್ ಶುದ್ಧಗೊಂಡು ಹರಿಯಬಹುದಾದರೆ ನಮಗೆ ವೃಷಭಾವತಿಯನ್ನು ಮತ್ತೊಮ್ಮೆ ಹರಿಯುವಂತೆ ಮಾಡುವುದು ಕಷ್ಟವಾಗಲೇಬಾರದು. ನೆನಪಿಡಿ. ಈ ಬಾರಿ ಏನಾದರೂ ನಾವು ಯಶಸ್ಸು ಪಡೆದರೆ ಇಡೀ ದೇಶಕ್ಕೆ ಮಾದರಿಯಾಗುವ ಕೆಲಸವನ್ನು ನಾವು ಮಾಡಿಬಿಡುತ್ತೇವೆ. ರಾಷ್ಟ್ರದಲ್ಲೆಲ್ಲಾ ನೀರಿನ ಮೂಲಗಳನ್ನು ಉಳಿಸುವ ಪ್ರಕ್ರಿಯೆಯೊಂದು ಸಹಜವಾಗಿಯೇ ಆರಂಭವಾಗಿರುವುದರಿಂದ ಜಲಶಕ್ತಿ ಎಂಬ ಇಲಾಖೆಯೇ ಮೈದಳೆದಿರುವುದರಿಂದ ನಮ್ಮ ಕೂಗಿಗೆ ನಿಜಕ್ಕೂ ಬೆಲೆಯಿದೆ. ನಾವು ಜೊತೆಗೂಡಿ ಒಂದು ಹೆಜ್ಜೆ ಮುಂದಿಡಬೇಕಾಗಿದೆ ಅಷ್ಟೇ. ಒಮ್ಮೆ ಸಂಕಲ್ಪಬದ್ಧರಾಗಿ ನೋಡಿ. ಮುಂದೇನೆಂಬುದು ನಿಮಗೇ ಅರಿವಾಗುತ್ತದೆ. ಇತಿಹಾಸ ಪುನರ್ರಚಿಸುವ ಈ ಅವಕಾಶದಿಂದ ವಂಚಿತರಾಗಬೇಡಿ. 22ಕ್ಕೆ ಓಟದಲ್ಲಿ ವೃಷಭಾವತಿಯ ಸೇನೆಯೊಂದಿಗೆ ಸೇರಿಕೊಳ್ಳಿ. 9686049412

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top