National

ಒಂದೇ ದಿನದಲ್ಲಿ ದೇಶದ್ರೋಹಿಗಳನ್ನು ‘ಉರಿ’ಸಬಲ್ಲ ಎರಡು ಸಿನಿಮಾಗಳು! ಏನಿದೆ ಅದರಲ್ಲಿ?

ರಾಷ್ಟ್ರೀಯವಾದಿಗಳಿಗೆ ಜನವರಿಯಲ್ಲಿ ಬಾಲಿವುಡ್ ಹಬ್ಬದೂಟ ನೀಡಲಿದೆ. ಕಳೆದೆರಡು ವಾರಗಳಿಂದ ಬಾಲಿವುಡ್ ನ ಎರಡು ಸಿನಿಮಾಗಳ ಕುರಿತು ಬಹುವಾಗಿ ಚರ್ಚೆ ನಡೆಯುತ್ತಿದೆ. ಒಂದು ಹತ್ತು ವರ್ಷಗಳ ಕಾಲ ಭಾರತದ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗರ ಜೀವನದ ಕುರಿತ ಸಿನಿಮಾ ಮತ್ತೊಂದು ಪಾಕಿಸ್ತಾನ ಉರಿಯಲ್ಲಿ ನಡೆಸಿದ ದಾಳಿಗೆ ಉತ್ತರವಾಗಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಗೆ ಸಂಬಂಧಪಟ್ಟಿದ್ದು.

ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗರಿಗೆ 2004 ರಿಂದ 2008ರವರೆಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರು ಮನಮೋಹನರ ಜೀವನವನ್ನಾಧರಿಸಿದ ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂಬ ಶೀರ್ಷಿಕೆಯನ್ನು ಹೊತ್ತ ಪುಸ್ತಕವನ್ನು 2014 ರಲ್ಲಿ ಹೊರತಂದರು. ಪುಸ್ತಕ ಬಿಡುಗಡೆಯಾದ ಹೊತ್ತಲ್ಲೇ ಕಾಂಗ್ರೆಸ್ಸು ಇದನ್ನು ವಿರೋಧಿಸಿತ್ತು. ಇದೀಗ ಈ ಪುಸ್ತಕವನ್ನಾಧರಿಸಿ ಸಿನಿಮಾವನ್ನು ಮಾಡಲಾಗಿದೆ. ಇದೇ ಜನವರಿ 11 ರಂದು ಈ ಚಿತ್ರ ದೇಶದಾದ್ಯಂತ ತೆರೆಗೆ ಬರಲಿದೆ. ವಿಜಯ್ ಗುಟ್ಟೆ ಈ ಚಿತ್ರದ ನಿರ್ದೇಶಕರಾಗಿದ್ದು, ಬಾಲಿವುಡ್ ನ ಪ್ರಖ್ಯಾತ ನಟ ಅನುಪಮ್ ಖೇರ್ ಅವರು ಮನಮೋಹನ ಸಿಂಗರ ಪಾತ್ರ ಮಾಡಿದ್ದಾರೆ. ಇದರ ಟ್ರೈಲರ್ ತುಣುಕು ಹೊರಬರುತ್ತಿದ್ದಂತೆ ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆ-ಜೊತೆಗೆ ಸಿನಿಮಾದ ಸುತ್ತ ಹಲವು ವಿವಾದಗಳು ಶುರುವಾಗಿವೆ.

ಸೋನಿಯಾ ಮನಮೋಹನರನ್ನು ಕುರ್ಚಿಯಲ್ಲಿ ಕೂರಿಸಿ ತಾನು ಆಳ್ವಿಕೆ ನಡೆಸಿದ್ದನ್ನು, ಮನಮೋಹನರು ಹೇಗೆ ಪರಿವಾರದ ಮಾತು ಕೇಳಬೇಕಾಯ್ತು ಎಂಬುವ ತುಣುಕುಗಳನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆಗೊಳ್ಳುತ್ತಿದ್ದಂತೆ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಅಕೌಂಟಿನಿಂದ ಸಿನಿಮಾದ ಟ್ರೈಲರ್ ಅನ್ನು ಶೇರ್ ಮಾಡಿದ್ದನ್ನು ಎಡಪಂಥೀಯರು ವಿರೋಧಿಸಿದ್ದಾರೆ. ಸದಾ ವಾಕ್ ಸ್ವಾತಂತ್ರ್ಯದ ಕುರಿತು ಮಾತನಾಡುವ ಕಾಂಗ್ರೆಸ್ಸು ಮತ್ತು ಎಡಪಂಥೀಯ ಬುದ್ಧಿಜೀವಿಗಳು ಚಿತ್ರದ ಟ್ರೈಲರ್ ಹೊರಬರುತ್ತಿದ್ದಂತೆ ಅದನ್ನು ನಿಷೇಧಿಸುವ ಕುರಿತು ಮಾತನಾಡಿದ್ದಾರೆ. ದೆಹಲಿಯ ಮೂಲದ ಫ್ಯಾಷನ್ ಡಿಸೈನರ್ ಪೂಜಾ ಮಹಾಜನ್ ಚಿತ್ರದ ಟ್ರೈಲರ್ ಅನ್ನು ನಿಷೇಧಿಸುವ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ದೆಹಲಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಜನವರಿ 3 ರಂದು ಬಿಹಾರದ ನ್ಯಾಯಾಲಯದಲ್ಲಿ ಅನುಪಮ್ ಖೇರ್ ಮತ್ತು 13 ಜನರ ವಿರುದ್ಧ ಕೇಸನ್ನು ಹಾಕಲಾಗಿತ್ತು. ಬಿಹಾರದ ನ್ಯಾಯಾಲಯ ಅನುಪಮ್ ಸೇರಿದಂತೆ 13 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ. ಹಲವು ಕಾಂಗ್ರೆಸ್ ಬೆಂಬಲಿತ, ಕಮ್ಯುನಿಸ್ಟ್, ಬುದ್ಧಿಜೀವಿ ಪತ್ರಕರ್ತರು ಚುನಾವಣೆಯ ಸಂದರ್ಭದಲ್ಲಿ ಇದೊಂದು ರಾಜಕೀಯದಾಟ ಎಂದು ಚಿತ್ರವನ್ನು ವಿರೋಧಿಸಿದ್ದಾರೆ. ಈ ಚಿತ್ರದ ಕುರಿತು ಎದ್ದಿರುವ ವಿವಾದದ ಬಗ್ಗೆ ಪ್ರಶ್ನೆ ಮಾಡಿದಾಗ ಜೆಡಿಎಸ್ ನ ಮುಖ್ಯಸ್ಥ ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ತಾವೂ ಒಬ್ಬ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಆಗಿದ್ದವರು ಎಂದು ಉತ್ತರ ನೀಡಿದ್ದಾರೆ. ಎಂದಿನಂತೆ ಮನಮೋಹನರು ಚಿತ್ರದ ಕುರಿತು ಯಾವ ಮಾತನ್ನೂ ಆಡದೇ ವಿವಾದಗಳಿಂದ ದೂರವುಳಿದಿದ್ದಾರೆ.

ಚಿತ್ರದಲ್ಲಿ ಮುಖ್ಯಪಾತ್ರ ಮಾಡಿರುವ ಅನುಪಮ್ ಖೇರ್ ಚಿತ್ರದ ಕುರಿತು ಮಾತನಾಡುತ್ತಾ ತಾನು ವಿವಾದಗಳನ್ನು ನಿರೀಕ್ಷಿಸಿದ್ದೇ ಎಂದರಲ್ಲದೇ ಆ ಪಾತ್ರವನ್ನು ಮಾಡಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ. ಈ ಚಿತ್ರ ನೊಡಿದ ನಂತರ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಮನಮೋಹನ ಸಿಂಗರ ಕುರಿತು ಒಳ್ಳೆಯ ಅಭಿಪ್ರಾಯ ಮೂಡಲಿದೆ ಎಂದಿದ್ದಾರೆ ಅನುಪಮ್ ಅವರು. ಇಷ್ಟೆಲ್ಲಾ ವಿವಾದಗಳ ನಡುವೆಯೂ ಟ್ರೈಲರ್ ಬಿಡುಗಡೆಗೊಂಡ 48 ಗಂಟೆಯೊಳಗೇ ಮಿಲಿಯನ್ನುಗಟ್ಟಲೆ ಜನ ನೋಡಿದ್ದಾರೆ. ಈ ಚಿತ್ರದ ಸುತ್ತ ವಿವಾದ ಬಿಸಿಯಾಗಿರುವ ಹೊತ್ತಲ್ಲೇ ಮನಮೋಹನ ಸಿಂಗರು ಕಾರ್ಯಕ್ರಮವೊಂದಲ್ಲಿ ತಾನು ಆ್ಯಕ್ಸಿಡೆಂಟಲ್ ರಾಜಕಾರಣಿ ಎಂದು ಹೇಳಿದ ವಿಡಿಯೊ ವೈರಲ್ ಆಗಿದೆ. ಜನವರಿ 11 ರಂದು ಬಿಡುಗಡೆಗೊಳ್ಳುವ ಈ ಚಿತ್ರಕ್ಕೆ ಜನ ಕಾಯುವಂತಾಗಿದೆ.

ದೇಶಭಕ್ತರ ಮನಸ್ಸನ್ನು ಕದ್ದು, ಎಡಪಂಥೀಯ, ಬುದ್ಧಿಜೀವಿ, ನಗರ ನಕ್ಸಲರ ಪಾಲಿಗೆ ಉರಿ ತರಿಸಿರುವ ಮತ್ತೊಂದು ಚಿತ್ರ ‘ಉರಿ’. ಈ ಚಿತ್ರವೂ ಜನವರಿ 11 ರಂದೇ ತೆರೆಕಾಣಲಿದೆ. ಪಾಕಿಸ್ತಾನ ಸಪ್ಟೆಂಬರ್ 2016 ರಲ್ಲಿ ಉರಿಯಲ್ಲಿ ದಾಳಿ ನಡೆಸಿ 19 ಸೈನಿಕರನ್ನು ಕೊಂದುಹಾಕಿತು. ಈ ಘಟನೆ ನಡೆದ ಹನ್ನೊಂದೇ ದಿನಗಳಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿ ಸುಮಾರು 40 ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೈನಿಕರನ್ನು ಯಮಪುರಿಗಟ್ಟಿ ಯಾರಿಗೂ ತಿಳಿಯದಂತೆ ಹಿಂದಿರುಗಿತ್ತು. ಈ ಘಟನೆ ನಡೆದಾಗ ಇಡಿಯ ದೇಶ ಭಾರತೀಯ ಸೇನೆಯ, ಮೋದಿ ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ತಲೆಬಾಗಿದರೆ, ಒಂದಷ್ಟು ಎಡಪಂಥೀಯ, ಬುದ್ಧಿಜೀವಿ, ನಗರ ನಕ್ಸಲರು, ಮಾಧ್ಯಮದವರು, ರಾಜಕಾರಣಿಗಳು ದಾಳಿ ನಡೆಸಿದ ಸಾಕ್ಷಿಯನ್ನು ಕೇಳಿ ಜನರ ಮುಂದೆ ಬೆತ್ತಲಾಗಿದ್ದರು. ದಾಳಿಯ ಒರಿಜಿನಲ್ ವಿಡಿಯೊ ಹೊರಬಂದ ನಂತರ ಅದು ಫೇಕ್ ಎಂದು ಜರಿದಿದ್ದರೂ ಅದೇ ಎಡಪಂಥೀಯ ಫೇಕ್ ಬುದ್ಧಿಜೀವಿಗಳು.

ಇದೀಗ ದಾಳಿಯ ಅಷ್ಟೂ ಘಟನೆಯನ್ನು ಆಧಾರವಾಗಿರಿಸಿಕೊಂಡು ಚಿತ್ರ ನಿರ್ಮಿಸಿದ್ದಾರೆ ಆದಿತ್ಯ ಧರ್ ಅವರು. ಸರ್ಜಿಕಲ್ ದಾಳಿ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದ ಸಾಹಸಗಾಥೆ ಎಂದು ಆದಿತ್ಯ ಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದ ಟ್ರೈಲರ್ ಅನ್ನು ಅದಾಗಲೇ 60 ಲಕ್ಷಕ್ಕೂ ಹೆಚ್ಚುಜನ ವೀಕ್ಷಿಸಿದ್ದಾರೆ. ದೇಶದಾದ್ಯಂತ ಯುವಜನರ ಹೃದಯಬಡಿತವನ್ನು ಈ ಟ್ರೈಲರ್ ಖಂಡಿತ ಹೆಚ್ಚಿಸಿದೆ ಎನ್ನುವುದರಲ್ಲಿ ಆವುದೇ ಸಂಶಯವಿಲ್ಲ. ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ಮುಖ್ಯಪಾತ್ರ ವಹಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಒಂದಷ್ಟು ಮಾಧ್ಯಮಗಳು ಉರಿ ಚಿತ್ರ ರಾಜಕೀಯದಾಟ ಎಂದು ಜರಿದಿದ್ದಾರೆ. ಹಿಂದೂ ಸಂಸ್ಕೃತಿಗೆ ಧಕ್ಕೆ ತರುವಂತಹ ತುಣುಕುಗಳನ್ನು ಪದ್ಮಾವತ್ ಚಿತ್ರ ಹೊಂದಿದೆ ಎಂದು ಅದರ ವಿರುದ್ಧ ದನಿಯೆತ್ತಿದ್ದ ಸಂದರ್ಭದಲ್ಲಿ ವಾಕ್ ಸ್ವಾತಂತ್ರ್ಯದ ಕುರಿತು ಭಾಷಣಬಿಗಿದು ಬೀದಿಗಿಳಿದು, ಚಿತ್ರವನ್ನು ಪ್ರದರ್ಶಿಸಲೇಬೇಕೆಂದು ಗಲಾಟೆ ಮಾಡಿದ್ದ ಸೋ ಕಾಲ್ಡ್ ಎಡ-ಬುದ್ಧಿಜೀವಿ ಮಾಧ್ಯಮಗಳು ಇದೀಗ ವಾಕ್ ಸ್ವಾತಂತ್ರ್ಯವನ್ನು ಮರೆತು ಚಿತ್ರವನ್ನು ನಿಷೇಧಿಸಬೇಕೆಂಬ ಮಾತುಗಳನ್ನಾಡುತ್ತಿರುವುದು ಅಚ್ಚರಿ ಮೂಡಿಸಿದೆ. ದೇಶವಿರೋಧಿಗಳ ಮನಸ್ಸಿನಲ್ಲಿ ಉರಿ ನಿಜವಾಗಿಯೂ ಉರಿ ತರಿಸಿದೆ!! ಬಾಲಿವುಡ್ ನ ಪ್ರಸಿದ್ಧ ನಟ ಪರೇಶ್ ರಾವಲ್ ‘ನಮ್ಮ ದೇಶದಲ್ಲಿ ಏನೇ ಮಾಡಿದರೂ ಅದನ್ನು ಕೆಟ್ಟದಾಗಿಯೇ ನೋಡುವ ಅಭ್ಯಾಸವಾಗಿ ಹೋಗಿದೆ. ಅದರಲ್ಲಿರುವ ಸಕಾರಾತ್ಮಕ ಚಿಂತನೆಗಳನ್ನು ಸ್ವೀಕರಿಸಲು ಬರುವುದೇ ಇಲ್ಲ. ಭಾರತೀಯ ಸೇನೆಯ ಈ ಅಭೂತಪೂರ್ವ ಸಾಹಸವನ್ನು ಹೊಗಳುವುದನ್ನು ಬಿಟ್ಟು ಇದನ್ನು ವಿರೋಧಿಸುವವರೂ ಇದ್ದಾರೆ. ನಮ್ಮ ಸೈನಿಕರನ್ನು ಕೊಂದಾಗ ಮಾತನಾಡದ ಈ ಜನ ಈಗ ಎದೆಬಡಿದುಕೊಳ್ಳುತ್ತಿದ್ದಾರೆ’ ಎಂದು ಸರಿಯಾಗಿಯೇ ಜರಿದಿದ್ದಾರೆ. ದೇಶದ ಬಹುಪಾಲು ಜನ ಉರಿ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಒಟ್ಟಾರೆ ಜನವರಿ 11, ದೇಶಭಕ್ತರಿಗೆ, ರಾಷ್ಟ್ರೀಯವಾದಿಗಳಿಗೆ, ಸಿನಿಮಾ ಪ್ರಿಯರಿಗೆ ಬಾಲಿವುಡ್ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಸಮರ್ಪಿಸಲಿದೆ. ದೇಶದ ಕಥನವನ್ನು ಹೊಂದಿರುವ ಈ ಚಿತ್ರಗಳನ್ನು ತಪ್ಪದೇ ವೀಕ್ಷಿಸೋಣ.

 

Click to comment

Leave a Reply

Your email address will not be published. Required fields are marked *

Most Popular

To Top