Politics

ಒಂದು ಪಕ್ಷದ ಮೂಲೋತ್ಪಾಟನೆಗೆ ಕಾರಣಗಳೇನು?

-ರಾಹುಲ್ ಅಶೋಕ್ ಹಜಾರೆ

1984 ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಹತ್ಯೆ, ಸಿಖ್ ಹತ್ಯಾಕಾಂಡದಿಂದ ಭಾರತದ ಐತಿಹ್ಯಕ್ಕೆ ಹಲವು ಕಪ್ಪುಚುಕ್ಕೆ ಇಟ್ಟ ವರ್ಷ.  ಇಂದಿರಾ ಹತ್ಯೆಯಾದ ನಂತರದ ಎರಡು ದಿನಗಳ ಘಟನಾವಳಿಗಳನ್ನು ಇತ್ತಿಚೆಗೆ ABP ನ್ಯೂಸ್‌ನ “ಪ್ರಧಾನಮಂತ್ರಿ” ಎಂಬ ಕಾರ್ಯಕ್ರಮದಲ್ಲಿ ತೋರಿಸಿತ್ತು.  ಇಂದಿರಾಗಾಂಧಿಯವರಿಗೆ ಗುಂಡು ತಗುಲಿದ ಸುದ್ದಿ ಬಂದಾಗ ರಾಜೀವ್ ಪಶ್ಚಿಮ ಬಂಗಾಲದಲ್ಲಿದ್ದರು. ಅವರು AIIMS ತಲುಪುತ್ತಿದ್ದಂತೆ ಮುಂದಿನ ಪ್ರಧಾನಿಯ ಆಯ್ಕೆಯ ಕುರಿತಾಗಿ ಮಾತುಕತೆ ಶುರುವಾಗಿತ್ತು. ಕಾಂಗ್ರೆಸ್ಸಿನ ವರಿಷ್ಟರಿಗೆ ರಾಜೀವ್‌ ಒಬ್ಬರೇ ಕಾಣುತ್ತಿದ್ದರು.  ಪ್ರಮಾಣವಚನ ಬೋಧಿಸಬೇಕಾದ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಯಮನ್‌ಗೆ ಹೋಗಿದ್ದರು. ರಾಜೀವ್ ಸಂಬಂಧಿ ಮತ್ತು ಕಾಂಗ್ರೆಸ್ಸಿನ ನೇತಾರ ಅರುಣ್ ನೆಹರೂ “ರಾಷ್ಟ್ರಪತಿಗಳು ಬರುವವರೆಗೂ ಕಾಯುವುದು ಬೇಡ. ಉಪರಾಷ್ಟ್ರಪತಿಗಳಿಂದಲೇ ಪ್ರಮಾಣವಚನವಾಗಲಿ. ಅಪ್ಪಿತಪ್ಪಿ ಸಿಂಗ್‌ ಬಂದರೆ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಮಾಡುತ್ತಾರೆ! ಒಂದು ವೇಳೆ ಪ್ರಣಬ್ ಪ್ರಧಾನಿ ಆದರೆ ತುಂಬಾ ಕಷ್ಟವಾಗುತ್ತದೆ!” ಎಂದು ಪ್ರಧಾನ ಮಂತ್ರಿಗಳ ಪ್ರಿನ್ಸಿಪಲ್ ಸೆಕ್ರೆಟರಿ ಪಿ.ಸಿ ಅಲೆಕ್ಸಾಂಡರ್‌ಗೆ ಹೇಳುತ್ತಾರೆ. ರಾಷ್ಟ್ರಪತಿಗಳಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಅವಮಾನವಾಗುತ್ತೆಂದು ಅಲೆಕ್ಸಾಂಡರ್‌ ಒಪ್ಪುವುದಿಲ್ಲ. ಈ ಮಾತನ್ನು AIIMSನಲ್ಲಿರುವ ರಾಜೀವ್ ಗಾಂಧಿ ಮುಂದಿಡುತ್ತಾರೆ. ಅವರು  ರಾಷ್ಟ್ರಪತಿ ಬರುವವರೆಗೆ ತಡೆಯಲು ಹೇಳುತ್ತಾರೆ. ರಾಷ್ಟ್ರಪತಿ ಬಂದ ನಂತರ ಎಲ್ಲವೂ ಪೂರ್ವನಿರ್ಧಾರಿತವಾದ್ದರಿಂದ ಏನನ್ನೂ ಬದಲಿಸದೇ ರಾಜೀವ್ ಅವರನ್ನು ಪ್ರಧಾನಿಗಳಾಗಿಸುತ್ತಾರೆ. ರಾಜೀವ್ ಪ್ರಮಾಣವಚನ ಸ್ವೀಕರಿಸಿದಾಗ ಇಂದಿರಾಜಿ ಶವ ದೆಹಲಿಯ AIIMS‌ನಲ್ಲಿತ್ತು! ಈಗ ಈ ಘಟನೆಗಳನ್ನು ನೆನೆಯಲು ಕಾರಣವಿದೆ. ಪ್ರಣಬ್ ಮುಖರ್ಜಿಯಂತ ಶುದ್ಧ“ಹಸ್ತ”ರು ಮತ್ತು ಧೀಮಂತ ಮುತ್ಸದ್ದಿ ಹೇಗೆ ಅಧಿಕಾರ ವಂಚಿತರಾದರು ಮತ್ತು ಕೈತಪ್ಪಿ ಹೋಗುತ್ತಿದ್ದ ಅಧಿಕಾರವನ್ನು ಮತ್ತೆ ಅದೇ ಕುಟುಂಬಕ್ಕೆ ಹಿಂದಿರುಗಿಸಲು ಕಾಂಗ್ರೆಸ್ ವಲಯದಲ್ಲಿನ ತರಾತುರಿಗಳು ಹೇಗಿದ್ದವು ಎಂಬುದರ ಸ್ಪಷ್ಟ ಮಾಹಿತಿ ಇದು.

ಇದೇ ಮೊದಲಲ್ಲ. ಪಟೇಲರಿಗೆ ದಕ್ಕಬೇಕಾದ  ಪಟ್ಟವನ್ನು ನೆಹರೂ ಪಡೆದ ರೀತಿಯೂ ವಿಭಿನ್ನವಾಗೇನು ಇಲ್ಲ. ಪ್ರದೇಶ ಕಾಂಗ್ರೆಸ್ ಸಮೀತಿಯ ಹದಿನೈದು ಜನರಲ್ಲಿ ಹನ್ನೆರಡು ಜನರ ಓಟು ಪಟೇಲರ ಪರವಾಗಿದ್ದರು. ಗಾಂಧಿ ಸಮೀತಿ ಸದಸ್ಯರ ಅಭಿಮತ ಮರೆತು. ಕಟ್ಟಾ ಶಿಷ್ಯ ಪಟೇಲರನ್ನು ತೊರೆದು ಮಾನಸಪುತ್ರ ನೆಹರೂ ಅವರನ್ನು ಆಯ್ದುಕೊಂಡರು. ಏತನ್ಮಧ್ಯೆ ಇಬ್ಭಾಗವಾಗಿ ಹೋದ ಪಾಕಿಸ್ತಾನಕ್ಕೆ 55 ಕೋಟಿ ಕೊಡುವುದಕ್ಕೆ ಪಟೇಲರು ಸಮ್ಮತಿಸಿರಲಿಲ್ಲ. ದುಡ್ಡು ಪಾಕಿಸ್ತಾನದ ಮತ್ಸರಾಗ್ನಿಗೆ ಹವಿಸ್ಸಾಗಿ ನಮಗೇ ಮುಳುವಾಗುತ್ತದೆಂದು ಅರಿತಿದ್ದರು. ಗಾಂಧಿ ನೆಹರು ಪಟ್ಟು ಹಿಡಿದು ಕೊಡಿಸಿಯೇ ಬಿಟ್ಟರು. ಪಾಕಿಸ್ತಾನ ಧಾಳಿಗೈದೇ ಬಿಟ್ಟಿತು. ಸ್ವತಂತ್ರಗೊಂಡಾಗ ದೇಶದ ಮೊದಲ ಸವಾಲು ಸಂಸ್ಥಾನಗಳ ರಾಜರ ಮನವೊಲಿಸುವುದಾಗಿತ್ತು. ದೇಶದ ಅಷ್ಟೂ ಸಂಸ್ಥಾನಗಳನ್ನು ಪಟೇಲರು ಕೆಲವೇ ತಿಂಗಳುಗಳಲ್ಲಿ ಭಾರತದ ತೆಕ್ಕೆಗೆ  ತೆಗೆದುಕೊಂಡರು. ಅವರು ಉಳಿಸಿದ ಗೋವೆಯನ್ನು ಭಾರತಕ್ಕೆ ಸೇರಿಸಲು ನೆಹರೂ ತೆಗೆದುಕೊಂಡದ್ದು ಹದಿನೈದು ವರ್ಷ! ಕಾಶ್ಮೀರ ಕಗ್ಗಂಟಾಗಿತ್ತು. ಚೀನಾದ ವಿರುದ್ಧ ಹೋರಾಡಲು ಸೈನಿಕರಿಗೆ ಶಕ್ತಿ ತುಂಬದೇ ಭಾರತ ತನ್ನ ಬಹುಪಾಲು ಭೂಮಿಯನ್ನು ಕಳೆದುಕೊಂಡಿತ್ತು. ನೆಹರೂ ಅವರ ಅಂಗೈಯಲ್ಲಿ ಹದಿನಾರುವರೆ ವರ್ಷ ದೇಶವಿತ್ತು. ಆಗ ತಾನೆ ಸ್ವತಂತ್ರಗೊಂಡ ದೇಶ ಹಸಿ ಮಣ್ಣಿನಂತೆ ರೂಪಾಂತರ ಬಲುಸುಲಭ. ಪ್ರಭಲ ವಿರೋಧ ಪಕ್ಷಗಳೂ ಇರಲಿಲ್ಲ. ಹೋದರೆ ಹೋಗಲಿ ನೆಹರೂ ಎರಡನೇ ಸಾಲಿನ ನಾಯಕರನ್ನೂ ಬೆಳೆಸಲಿಲ್ಲ. ತಮ್ಮ ನಂತರ ಇಂದಿರಾ ಅವರೇ ಪ್ರಧಾನಿಯಾಗಬೇಕು ಎಂಬ ಇಂಗಿತವಿತ್ತು. ಇಂದಿರಾ ಗಾಂಧಿ ಜಾಣೆ ದೇಶದ ಸ್ಥಿತಿ ತಿಳಿದು ಹಿಂದಡಿಯಿಟ್ಟರು.ಇಂಥ ನಿರ್ವಾತವನ್ನು ಸೂಕ್ತವಾಗಿ ತುಂಬಿದ್ದು ಶಾಸ್ತ್ರಿಜಿ. ಶಾಸ್ತ್ರಿಯವರು ದೇಶಕ್ಕೆ ವಾರಕ್ಕೊಂದು ಊಟ ಬಿಡಲು ಕರೆ ಕೊಡುತ್ತಾರೆ ಎಂದರೆ ನೆಹರೂ ಆಡಳಿತದಲ್ಲಿ ದೇಶ ಅದ್ಯಾವ ಬಡತನಕ್ಕೆ ತಳ್ಳಲ್ಪಟ್ಟಿತ್ತು ಎಂಬುದಕ್ಕೊಂದು ಕನ್ನಡಿ.  ಶಾಸ್ತ್ರಿಯವರು ಮೃದು ಮನಸ್ಸಿನ ಜನಾನುರಾಗಿಯಾಗಿದ್ದರೂ ಸಹ ದೇಶದ ಸುರಕ್ಷತೆಗೆ ಧಕ್ಕೆ ಬಂದಾಗ ಪಾಕಿಸ್ತಾನಕ್ಕೆ ಕಟುವಾದ ಉತ್ತರವನ್ನೂ ಕೊಟ್ಟಿದ್ದರು. ದೇಶದ ದುರ್ದೈವ ಅನುಮಾನಾಸ್ಪಾದವಾಗಿ ತೀರಿಹೋದರು. ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡದಂತೆ ಒತ್ತಡ ಬಂದಿತ್ತು! ಮತ್ತೊಮ್ಮೆ ಆಡಳಿತ ಕುಟುಂಬದ ಕೈಗೆ ದಕ್ಕಿತು. ಆದರೆ ಇಲ್ಲೊಂದು ಮಾತು ಒಪ್ಪಲೇಬೇಕು. ನೆಹರೂಗೆ ದಕ್ಕದ ಆಡಳಿತಾತ್ಮಕ ನಿಲುವುಗಳು ಇಂದಿರೆಗೆ ದಕ್ಕಿದ್ದವು. ಇಂದಿರಾಗಾಂಧಿ ಇಡಿಯ ಸಂಪುಟವನ್ನು ತನ್ನ ಸುಪರ್ದಿನಲ್ಲಿಟ್ಟುಕೊಂಡಿದ್ದಳು. ಚೀನಾದ ವಿರುದ್ಧ ನೆಹರೂ ಸೋತು ಸುಣ್ಣವಾದಂತೆ ಇಂದಿರೆ ಆಗಲಿಲ್ಲ. ಬದಲಾಗಿ ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾ ವಿಮುಕ್ತಿಗೊಳಿಸಿದರು. ಹಲವಾರು ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸಿದರು. ಇಂದಿರಾ ಗಾಂಧಿಯವರು ಅಧಿಕಾರದ ಮೊಗಸಾಲೆಯಲ್ಲಿ ತಾನೊಬ್ಬಳೇ ಇರಬೇಕು ಎಂದು ನಿರ್ಧರಿಸಿದರು ನೋಡಿ. ಅಧಿಕಾರ ಕೈ ತಪ್ಪಿ ಹೋಗುತ್ತದೆ ಎಂದು ಅರಿತ ಕೂಡಲೆ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು ದೇಶವನ್ನು ಉಸಿರೆತ್ತದ ಪರಿಸ್ಥಿತಿಗೆ  ತಳ್ಳಿಬಿಟ್ಟರು. ರಾಜೀವ್ ಗಾಂಧಿಯ ನಂತರ ಒಬ್ಬರು ಅಧಿಕಾರಕ್ಕೆ ಬೇಕಾಗಿತ್ತು. ರಾಹುಲ್ ಚಿಕ್ಕವ ಸೋನಿಯಾ ಪತಿವಿಯೋಗದ ದುಃಖದಲ್ಲಿದ್ದರು. ಆಗ ಕುಟುಂಬೇತರ ವ್ಯಕ್ತಿ ಪಿ.ವ್ಹಿ.ನರಸಿಂಹರಾವ್ ಕಣ್ಣಿಗೆ ಬಿದ್ದರು. ನರಸಿಂಹರಾವ್ ಆಡಳಿತದ ಬಗ್ಗೆ ಎರಡು ಮಾತೇ ಇಲ್ಲ. ಅಂತಹ ಮುತ್ಸದ್ದಿ ನಾಯಕನ ನಿಧನವಾದಾಗ ಕಾಂಗ್ರೆಸ್ ಹೆಡ್‌ಕ್ವಾಟ್ರಸ್‌ನ ಎದುರು ಕೆಲಗಳಿಗೆ ಅಂತಿಮ ದರ್ಶನಕ್ಕೆ ಇಡಲೂ ಕುಟುಂಬ ಪ್ರೇರಿತ ಕಾಂಗ್ರೆಸ್ ಒಪ್ಪಲಿಲ್ಲ.

ಮತ್ತೊಮ್ಮೆ ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಸೋನಿಯಾ ಅವರನ್ನು ಪ್ರಧಾನಿ ಮಾಡಲು ವಿರೋಧ ವ್ಯಕ್ತವಾದಾಗ ಹಿನ್ನೆಲೆಯಲ್ಲಿ ನಿಂತು ಮನಮೋಹನಸಿಂಗರನ್ನು ಸೋನಿಯಾ ನಿಯಂತ್ರಿಸಿದರು. ಇಷ್ಟೆಲ್ಲಾ ಹೇಳಿದ್ದೇಕೆಂದರೆ ಕಾಂಗ್ರೆಸ್ಸು ಕುಟುಂಬದ ಹೊರಗೆ ಬರಲೇ ಇಲ್ಲ. ಒಂದು ವೇಳೆ 2014 ರಲ್ಲಿ ಪ್ರಣಬ್‌ಜಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದ್ದರೆ ಅಷ್ಟೊಂದು ಹೀನಾಯವಾಗಿ ಸೋಲುತ್ತಿರಲಿಲ್ಲ. ಇಡಿಯ ದೇಶದಿಂದ ಮೂಲೋತ್ಪಾಟನೆಗೊಂಡ ನಂತರವೂ ಅದೇ ಕುಟುಂಬದ ನಾಯಕನನ್ನು ಒಪ್ಪಿಕೊಳ್ಳುವ ಮತ್ತು ಅವರ ತಪ್ಪುಗಳನ್ನೆ ಸಮರ್ಥಿಸಿಕೊಳ್ಳುವ ದರ್ದು ಕಾಂಗ್ರೆಸ್ಸಿಗೇಕೆ? ಸಂಸತ್ತಿನಲ್ಲಿ ಬಳಸಬಾರದ ಕೆಲವು ಪದ(ಅಸಂಸದೀಯ ಪದ)ಗಳಿವೆ. ಆದರೆ ಸಂಸತ್ತಿನ ಗೌರವ ಮರೆತು ಕಣ್ಣು ಹೊಡೆದ ರಾಹುಲ್‌ನನ್ನು ಹಿರಿಯರಾದ ಖರ್ಗೆ ಸಮರ್ಥಿಸುತ್ತಿರುವುದು ಬಾಸ್‌ನ ಮಗುವನ್ನು ಎತ್ತಿ ಮುದ್ದಾಡುವ ನೌಕರನ ಅನಿವಾರ್ಯತೆಗಿಂತ ವಿಭಿನ್ನವಾಗೇನು ಕಾಣುವುದಿಲ್ಲ. ಅದರ ಹಿಂದೆಯೇ ಸಾಗರಿಕ, ಶಶಿ ತರೂರ್, ರಮ್ಯಾ ಎಲ್ಲರೂ ರಾಹುಲ್ ಅವರನ್ನೇ ಸಮರ್ಥಿಸುತ್ತಾ ಅದನ್ನೇ ಗೆಲುವೆಂದುಕೊಳ್ಳುವುದು ವ್ಯಂಗ್ಯ. ನಿರಂತರ ಸೋಲುಗಳ ನಂತರ ಪರ್ಯಾಯ ನಾಯಕನನ್ನು ಕಂಡುಕೊಳ್ಳದ ಕಾಂಗ್ರೆಸ್ಸಿನ ಬಗ್ಗೆ ಅಯ್ಯೋ ಅನಿಸುತ್ತದೆ. ನೆಹರೂ ಅವರನ್ನು ಪ್ರಧಾನಿ ಮಾಡಿದ ಗಾಂಧಿ “ನೆಹರು ವಿದೇಶಾಂಗ ಸಂಬಂಧಗಳನ್ನು ಚೆನ್ನಾಗಿ ನಿರ್ವಹಿಸಬಲ್ಲರು” ಎಂಬ ಹುಸಿ ಸಮರ್ಥನೆಯನ್ನು ಕೊಟ್ಟರು ಒಪ್ಪೋಣ. ತುರ್ತು ಪರಿಸ್ಥಿತಿಯನ್ನು ಒಲ್ಲದ ಮನಸ್ಸಿನಿಂದ ಅರೆಗಳಿಗೆ ಹೊರಗಿಟ್ಟು ಇಂದಿರಾ ಅವರ ಧೈರ್ಯ, ಬ್ಯಾಂಕುಗಳ ರಾಷ್ಟ್ರೀಕರಣ, ಬಾಂಗ್ಲಾ ವಿಮುಕ್ತಿಗಳನ್ನೂ ಒಪ್ಪಿಕೊಳ್ಳಬಹುದು. ರಾಜೀವ್ ಅವರ ದೇಶವನ್ನು ತಂತ್ರಜ್ಞಾನದಲ್ಲಿ ಮುಂದೆ ತರುವ ಅಭಿಲಾಷೆಯನ್ನು ಒಪ್ಪಿಕೊಳ್ಳೋಣ. ಸೋನಿಯಾರ ರಾಜಕೀಯ ತಂತ್ರಗಾರಿಕೆಯ ಬಗ್ಗೆಯೂ ಕಾಂಗ್ರೆಸ್ಸಿಗರು ಸಮರ್ಥನೆ ಕೊಡಬಹುದು. ರಾಹುಲ್ ಗಾಂಧಿಗೇನು ಸಮರ್ಥನೆಗಳಿವೆ? ನೆಹರೂ ಆದಿಯಾಗಿ ಎಲ್ಲ ನಾಯಕರು NRIಗಳು, ಹಾಲು ಉತ್ಪಾದನೆಯಲ್ಲಾದ ಹೆಚ್ಚಳಕ್ಕೆ ಮಹಿಳೆಯರೇ ಕಾರಣ, ಕೊಕಾಕೋಲಾ ಮಾಲೀಕ ಶೀಕಂಜಿ ಮಾರುತ್ತಿದ್ದ ಎಂಬ ಹೇಳಿಕೆಗಳು. ಏನೇ ಪ್ರಶ್ನೆ ಕೇಳಿದರೂ ಮಹಿಳಾ ಸಬಲೀಕರಣ, GST, ಬಡತನ ನಿರ್ಮೂಲನೆಗೆ ಉತ್ತರ ಅಂತ್ಯವಾಗುವ ರಾಹುಲ್‌ಗೆ ಪರ್ಯಾಯ ನಾಯಕರು ಕಾಂಗ್ರೆಸ್ಸಿನಲ್ಲಿಲ್ಲವೇ?

ಎರಡನೇಯ ಸಾಲಿನ ನಾಯಕರನ್ನು ಬೆಳೆಯಗೊಡದೇ ಯಾವುದೇ ಪಕ್ಷಕ್ಕೆ ಉಳಿಗಾಲವಿಲ್ಲ. ಇಷ್ಟು ದಿನ ಒಂದೇ ಕುಟುಂಬದವರಿದ್ದರೂ ಕಾಂಗ್ರೆಸ್ ಉಳಿದಿದ್ದಕ್ಕೆ ಕಾರಣ ಪ್ರಭಲ ವಿರೋಧ ಪಕ್ಷಗಳಿರಲಿಲ್ಲ. ಈಗ ಆ ಸ್ಥಿತಿ ಇಲ್ಲ. ಬಿಜೆಪಿಯಲ್ಲೂ ಮೋದಿ ಬಂದಾಗ ಹಳೆಯ ನಾಯಕರಾದ ಆಡ್ವಾಣಿ, ಮುರುಳಿ ಮನೊಹರ್ ಜೋಷಿಯಂತವರು ನಿವೃತ್ತರಾಗಲೇಬೇಕಿತ್ತು. ಆದರೆ ಮೋದಿ ಎರಡನೇ ಸಾಲಿನಲ್ಲಿ ಮನೋಹರ್ ಪರಿಕರ್, ಯೋಗಿ, ದೇವೇಂದ್ರ ಫಡ್ನವಿಸ್ , ಪಿಯುಷ್ ಗೋಯಲ್, ಬಿಪ್ಲಬ್ ಕುಮಾರ್ ಈ ರೀತಿ ಹೊಸಬರ ದಂಡನ್ನೇ ಸಿದ್ಧಪಡಿಸಿದರು. ಕರ್ನಾಟಕದ ಮಟ್ಟಿಗೆ ಬಿಜೆಪಿಯೂ ಈ ನಿಟ್ಟಿನಲ್ಲಿ ಎಡವಿದೆ ಎಂತಲೇ ಹೇಳಬೇಕು.  ಕಾಂಗ್ರೆಸ್ ಎರಡನೇ ಸಾಲಿನ ನಾಯಕರನ್ನು ಕಂಡುಕೊಳ್ಳುವ ಯೋಚನೆಯಲ್ಲಿಲ್ಲ ರಾಜ್ಯ ಬಿಜೆಪಿಯೂ ಇದ್ದಂತೆ ಕಾಣುವುದಿಲ್ಲ. ಇದು ಪಕ್ಷಗಳ ಅಧಃಪತನಕ್ಕೆ ದಾರಿಯಷ್ಟೆ.‌

Click to comment

Leave a Reply

Your email address will not be published. Required fields are marked *

Most Popular

To Top