National

ಏ ದಿಲ್ ಮಾಂಗೇ ಮೋರ್!

ಕಾರ್ಗಿಲ್ ಕದನದ ಅತ್ಯಂತ ಮಹತ್ವದ ಕದನ ಪಾಯಿಂಟ್ 5140 ಅನ್ನು ವಶಪಡಿಸಿಕೊಳ್ಳುವುದು. ಪಾಕಿಗಳು ಎರಡು ಸಂಗರ್ ಗಳನ್ನು ಆ ಬೆಟ್ಟದ ತುದಿಯಲ್ಲಿ ನಿರ್ಮಿಸಿದ್ದರು ಮತ್ತು ಪೂರ್ವಕ್ಕೆ ಐದು ಸಂಗರ್ ಗಳನ್ನು ಕಟ್ಟಿದ್ದರು. ಏಳು ಸಂಗರ್ ಗಳು! ಈ ಮಾಹಿತಿ ಎಂತಹ ಗಂಡೆದೆಯವನನ್ನೂ ನಡುಗಿಸಿಬಿಡುವಂಥದ್ದು. 5140 ವಶಪಡಿಸಿಕೊಳ್ಳಲೇಬೇಕೆಂದು ನಿಶ್ಚಯಿಸಿಬಿಟ್ಟಿತ್ತು ಸೇನೆ. ದ್ರಾಸ್ ವಲಯದಲ್ಲಿದ್ದ ಎಲ್ಲ ಫಿರಂಗಿಗಳನ್ನು, ಮೋರ್ಟಾರ್ ಗನ್ನುಗಳನ್ನು ಪಾಯಿಂಟ್ 5140 ಸುತ್ತ ನಿಲ್ಲಿಸಲಾಯ್ತು. ಯೋಜನೆ ರೂಪುಗೊಂಡಿತು. 18 ಗಢವಾಲ್ ರೈಫಲ್ಸ್ ಪೂರ್ವದಿಂದ, 1 ನಾಗಾ ನೈರುತ್ಯದಿಂದ ಮತ್ತು 13 ಜ್ಯಾಕ್ ರೈಫಲ್ಸ್ ದಕ್ಷಿಣದಿಂದ. ಶತ್ರುವಿನ 5 ಸಂಗರ್ ಗಳು ಪೂರ್ವ ದಿಕ್ಕಾಗಿದ್ದುದರಿಂದ ಗಢವಾಲಿಗಳು ನೇರವಾಗಿ ಅವರನ್ನು ಯುದ್ಧಕ್ಕೆಳೆದು ಕಾದಾಡುತ್ತಿರುವಾಗ ದಕ್ಷಿಣದಿಂದ ಅನಿರೀಕ್ಷಿತ ದಾಳಿ ನಡೆಸುವ ಬಯಕೆ ಜ್ಯಾಕ್ ಗಳದ್ದು. ಜಮ್ಮು-ಕಾಶ್ಮೀರ ರೈಫಲ್ಸ್ ನ ಈ ದಾಳಿಯ ಒಂದು ಗುಂಪಿನ ನೇತೃತ್ವ ಕ್ಯಾಪ್ಟನ್ ವಿಕ್ರಂ ಬಾತ್ರಾರದ್ದು.

ಪಾಯಿಂಟ್ 5140 ಸಾವಿರ ಅಡಿ ಎತ್ತರದ ಪರ್ವತ. ಇದನ್ನು ವಶಪಡಿಸಿಕೊಳ್ಳುವ ಕಾದಾಟವಿರಲಿ ಏರುವುದೇ ಬಲು ದೊಡ್ಡ ಸಾಹಸ. ವಿಕ್ರಂ ಬಾತ್ರಾ ತನ್ನೊಂದಿಗೆ ಸೈನಿಕರನ್ನು ಹುರಿದುಂಬಿಸಿದರು. ‘ಹೋಗುವಾಗ ಎಷ್ಟು ಜನರಿದ್ದೀವೋ, ಮರಳುವಾಗಲೂ ಅಷ್ಟೇ ಇರಬೇಕು’ ಎಂದರು. ‘ನಾವು ಬಂದಿರುವುದು ದೇಶಕ್ಕಾಗಿ ಪ್ರಾಣ ನೀಡಲಲ್ಲ; ದೇಶದ ವಿರೋಧಿಗಳ ಪ್ರಾಣ ತೆಗೆಯಲು, ನೆನಪಿರಲಿ’ ಎನ್ನುತ್ತ ರಕ್ತ ಬೆಚ್ಚಗಾಗಿಸಿದರು. ಈ ಆಪರೇಷನ್ನಿನಲ್ಲಿ ಅವರಿಗೆ ಕೊಟ್ಟ ಹೆಸರು ಶೇರ್ ಶಾಹ್. ಕದನದ ವಿಚಾರ ಬಂದರೆ ಬಾತ್ರಾ ಅಕ್ಷರಶಃ ಹುಲಿಯೇ, ಹಸಿದ ಹುಲಿ. ಇವರು ಬೆಟ್ಟವನ್ನು ಹತ್ತಲು ಶುರು ಮಾಡಿದರು. ಗನ್ನು ಹೊಡೆತಕ್ಕೆ ಸಿಕ್ಕುವಷ್ಟು ಹತ್ತಿರ ಬಂದೊಡನೆ ಮೇಲಿಂದ ದಾಳಿ ಶುರುವಾಯ್ತು. ಯಾವ ದಿಕ್ಕಿನಿಂದಲೂ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಅಷ್ಟಾದರೂ ಸೈನಿಕ ಉತ್ಸಾಹ ಮಾತ್ರ ತಗ್ಗಲಿಲ್ಲ.

ಭಾರತೀಯ ಪಡೆ ಹತ್ತಿರ ಬಂದಿರುವ ಸುಳಿವು ಸಿಗುತ್ತಲೇ ಪಾಕಿಗಳು ಭಯಾನಕವಾದ ಶೆಲ್ ದಾಳಿ ಆರಂಭಿಸಿದರು. ಇನ್ನು ಐವತ್ತು ಮೀಟರ್ ಗಳಷ್ಟು ಅಂತರ ಅಷ್ಟೇ. ಅತ್ತ ಪಾಕೀ ಪಡೆ ಕಾಣುತ್ತಿದೆ. ನಡುವೆ ಮಂಜಿನ ರಾಶಿ. ಪಾಕಿಗಳು ಬೆಳಕಿನ ಮತಾಪು ಹಾರಿಸಿದಾಗ ಬಾತ್ರಾ ಪಡೆ ಅಂಗಾತ ಮೈ ಚೆಲ್ಲಿ ಸತ್ತಂತೆ ನಟಿಸಿ ಬಿದ್ದಿತ್ತು. ಭಾರತೀಯ ಸೈನಿಕರು ಹೆಣವಾಗಿದ್ದಾರೆಂದು ಸ್ವಲ್ಪ ನಿರಾಳವಾಗುತ್ತಿದ್ದಂತೆ ನಮ್ಮೆಲ್ಲ ಸೈನಿಕರು ಎದ್ದು ಪಾಕೀ ಸೈನಿಕರತ್ತ ಧಾವಿಸಲಾರಂಭಿಸಿದರು. ಕೈಯಲ್ಲಿರುವ ಬಂದೂಕಿನಿಂದ ದಾಳಿ ಮಾಡುತ್ತ ಸಾಗಿದ ನಮ್ಮ ಸೇನೆಯ ಸುಮಾರು ನೂರು ಜನ ಸೈನಿಕರ ಏಕರೂಪಿ ಆಕ್ರಮಣಕ್ಕೆ ಶತ್ರುಗಳು ತತ್ತರಿಸಿ ಅತ್ತಿಂದಿತ್ತ ಓಡಿದರು. ನಾಲ್ಕು ಜನರ ಶವ ಗುಡ್ಡದ ಒಂದು ಬದಿಯಲ್ಲಿ ಉರುಳಿಬಿತ್ತು. ಯುದ್ಧ ಅರ್ಧ ಗೆದ್ದಂತಾಯ್ತು ಅಷ್ಟೇ. ಪ್ರದೇಶವನ್ನು ಸ್ವಚ್ಛಗೊಳಿಸಿದ ಮೇಲೆ ಬಂಕರ್ ಗಳನ್ನು ಹೊಕ್ಕು ಕುಳಿತರು. ಅಲ್ಲಿಂದ ಪಾಕಿಯರು ಅಡಗಿರಬಹುದಾದ ಮತ್ತೆರಡು ಬಂಕರ್ ಗಳ ಮೇಲೆ ವ್ಯವಸ್ಥಿತ ದಾಳಿಗೈದು ಅಳಿದುಳಿದ ಪಾಕಿಗಳನ್ನು ಕೊಂದು ಬಿಸಾಡಿದರು.

ಇನ್ನು ಯಾವ ಪಾಕೀ ಸೈನಿಕನೂ ಉಳಿದಿಲ್ಲವೆಂದು ಖಾತ್ರಿಯಾದಾಗ ವಿಕ್ರಂ ಬಾತ್ರಾ ಬೇಸ್ ಕ್ಯಾಂಪಿಗೆ ಸಂದೇಶ ಕಳಿಸಿದರು ‘ಯೇ ದಿಲ್ ಮಾಂಗೇ ಮೋರ್’. ಈ ಗುಡ್ಡದ ತುದಿಯನ್ನು ವಶಪಡಿಸಿಕೊಂಡಾಗಿದೆ. ಈ ಹೃದಯ ಇನ್ನೂ ಬೇಕೆನ್ನುತ್ತಿದೆ ಎಂಬ ಅರ್ಥ ಹೊಮ್ಮಿಸುವ ಸಾಲು ಅದು. ಬಾತ್ರಾ ಪಾಯಿಂಟ್ 5140 ತುದಿತಲುಪಿ ಕೀರ್ತಿ ಶಿಖರವನ್ನೇ ಏರಿಬಿಟ್ಟರು. ಈ ಗುಡ್ಡದ ತುದಿ ತಲುಪುವಲ್ಲಿ ತನ್ನ ತಂಡದ ಒಬ್ಬೇ ಒಬ್ಬ ಸೈನಿಕನನ್ನೂ ಬಲಿಕೊಡಲಿಲ್ಲವೆಂಬುದು ಅವರ ಕೀರ್ತಿ ಕಿರೀಟಕ್ಕೆ ಗರಿಯಾಗಿತ್ತು!

Click to comment

Leave a Reply

Your email address will not be published. Required fields are marked *

Most Popular

To Top