National

ಎಡವಟ್ಟು ಮಾಡಿಕೊಳ್ಳದಿದ್ದರೆ ಗೆಲುವು ಖಾತ್ರಿ!

ಚುನಾವಣೆಗೆ ಇನ್ನು ಹೆಚ್ಚೆಂದರೆ 20 ದಿನಗಳು ಬಾಕಿ ಇವೆ. ಬಹುಶಃ ಚುನಾವಣೆಯ ಭರಾಟೆಯೇ ಇಲ್ಲದ ಮೊದಲ ಸಾರ್ವತ್ರಿಕ ಚುನಾವಣೆ ಇದಿರಬಹುದೇನೋ. ಮೊದಲೆಲ್ಲಾ ಚುನಾವಣೆಗೂ ಮೂರು ತಿಂಗಳ ಮುನ್ನವೇ ಕಣ ರಂಗೇರುತ್ತಿತ್ತು. ಕಳೆದ ಬಾರಿಯೂ ಕಾಂಗ್ರೆಸ್ಸನ್ನು ತೆಗೆದೊಗೆದು ನರೇಂದ್ರಮೋದಿಯವರನ್ನು ಪ್ರಧಾನಿಯಾಗಿಸಬೇಕೆನ್ನುವ ತವಕದಲ್ಲಿ ಆರು ತಿಂಗಳ ಮುನ್ನವೇ ಕಾವು ಜೋರಾಗಿತ್ತು. ಈ ಬಾರಿ ಹಾಗೇನೂ ಕಾಣುತ್ತಿಲ್ಲ. ಹಾಗಂತ ಎಲ್ಲವೂ ಬಿಕೊ ಎನ್ನುತ್ತಿದೆ ಎಂದು ಭಾವಿಸಬೇಡಿ. ಫೇಸ್ಬುಕ್, ವಾಟ್ಸಪ್ ಮತ್ತು ಟ್ವಿಟರ್ಗಳಲ್ಲಿ ಮೋದಿ ಹವಾ ಭರ್ಜರಿಯಾಗೇ ನಡೆಯುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನ ಮೋದಿ ಅಲೆಯನ್ನು ಜನಮಾನಸಕ್ಕೆ ಮುಟ್ಟಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವತಃ ಬಿಜೆಪಿ ಕಾರ್ಯಕರ್ತರಿಗಿಂತಲೂ ಹೆಚ್ಚು ಹೆಚ್ಚು ಕೆಲಸ ಮಾಡುವ ವಾತಾವರಣ ಇಂದು ನಿಮರ್ಾಣಗೊಂಡಿದೆ. ಹೋದ ಬಾರಿ ಮೋದಿಯವರ ಅಲೆ ಏನು ಎದ್ದು ನಿಂತಿತ್ತೊ ಈ ಬಾರಿ ಅದು ಘನೀಭವಿಸಿದೆ. ಹೀಗಾಗಿಯೇ ಕಾಣದೇ ಇರುವುದನ್ನು ಇಲ್ಲವೆಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹಾಗಂತ ಅದನ್ನೇ ನಂಬಿಕೊಂಡು ಕೂರುವ ಪರಿಸ್ಥಿತಿಯೂ ಇಲ್ಲ. ಈ ಕಾರಣಕ್ಕೆ ಎರಡೂ ಪಕ್ಷಗಳು ಕೆಲಸ ಮಾಡಬೇಕೋ ಬಿಡಬೇಕೋ ಎಂಬ ಗೊಂದಲದಲ್ಲಿರೋದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕನರ್ಾಟಕದಲ್ಲಿ ಬಿಜೆಪಿ ಕೆಲಸ ಶುರುಮಾಡಿಯೇ ಇಲ್ಲ ಎಂದು ದೂರುತ್ತಿರುವವರು ಕಾಂಗ್ರೆಸ್ ಕೂಡ ಕೆಲಸವನ್ನು ಆರಂಭಿಸಿಲ್ಲ ಎಂಬುದನ್ನು ಗಮನಿಸಲೇಬೇಕಲ್ಲ. ಆದರೆ ಒಂದಂತೂ ಸತ್ಯ. ಈ ಬಾರಿ ಬಿಜೆಪಿ ತನಗಿರುವ ಅವಕಾಶವನ್ನು ಕಳೆದುಕೊಂಡರೆ ಕೈಗೆ ಬಂದ ತುತ್ತನ್ನು ಕಳೆದುಕೊಂಡಂತೆಯೇ!

ಸಮಸ್ಯೆ ಎರಡೂ ಕಡೆಗಳಲ್ಲಿದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದ್ದರೆ ಕಾಂಗ್ರೆಸ್ಸಿಗೆ ಮೈತ್ರಿಯದ್ದೇ ಗೊಂದಲ. ಕಳೆದ ಬಾರಿ 17 ಕ್ಷೇತ್ರವನ್ನು ಗೆದ್ದಿದ್ದ ಬಿಜೆಪಿಯಲ್ಲಿ ಆಯಾ ಕ್ಷೇತ್ರದ ಸಂಸದರ ವಿರುದ್ಧ ಆಕ್ರೋಶ ಜೋರಾಗಿಯೇ ಇದೆ. ಬೆಳಗಾವಿಯಲ್ಲಿ, ಹಾವೇರಿಯಲ್ಲಿ, ಉಡುಪಿ-ಚಿಕ್ಕಮಗಳೂರುಗಳಲ್ಲಿ, ಬೆಂಗಳೂರು ಉತ್ತರದಲ್ಲಿ, ಉತ್ತರ ಕನ್ನಡದಲ್ಲಿ, ಮೈಸೂರಿನಲ್ಲಿ ಇಲ್ಲೆಲ್ಲಾ ಬೇರೆ ಬೇರೆ ಕಾರಣಗಳಿಗಾಗಿ ಜನ ಸಂಸದರನ್ನು ದೂಷಿಸುತ್ತಾರೆ. ಕೆಲವೆಡೆ ಸಂಸದರ ಅಹಂಕಾರ ಮೇರೆ ಮೀರಿದರೆ ಇನ್ನೂ ಕೆಲವೆಡೆ ಐದು ವರ್ಷಗಳ ಅವಧಿಯಲ್ಲಿ ಅವರು ತಮ್ಮ ಬಳಿ ಬಂದೇ ಇಲ್ಲ ಎಂಬ ಆಕ್ರೋಶ ಜನರಿಗಿದೆ. ಇವೆಲ್ಲದರ ನಡುವೆಯೂ ಮೋದಿಗಾಗಿ ಅವಡುಗಚ್ಚಿ ವೋಟು ಹಾಕುತ್ತೇವೆಂಬ ಮಾತುಗಳನ್ನು ಪ್ರತಿಯೊಬ್ಬರೂ ಆಡುತ್ತಿದ್ದಾರೆ. ಅದು ಬಿಜೆಪಿಗೆ ಶ್ರೀರಕ್ಷೆಯಾಗಬಹದು. ಇನ್ನು ಮೈತ್ರಿಯಿಂದಾಗಿ ಉಂಟಾಗಿರುವ ಗೊಂದಲಗಳು ಬಿಜೆಪಿಗೆ ಲಾಭದಾಯಕವೂ ಹೌದು. ದಳ ಹುಟ್ಟಿದಾಗಿನಿಂದಲೂ ಕಾಂಗ್ರೆಸ್ ವಿರೋಧಿಯಾಗಿಯೇ ಬೆಳೆದುಕೊಂಡು ಬಂದಿದೆ. ಒಕ್ಕಲಿಗರನ್ನು ಕಾಂಗ್ರೆಸ್ಸಿಗೆ ವಿರೋಧವಾಗಿ ರೂಪಿಸುವಲ್ಲಿ ದೇವೇಗೌಡರು ತಮ್ಮ ಜೀವಮಾನದ ಶ್ರಮವನ್ನೆಲ್ಲಾ ವ್ಯಯಿಸಿದ್ದಾರೆ. ಅತ್ತ ದಳದಿಂದ ಆಚೆ ಬಂದೊಡನೆ ಸಿದ್ದರಾಮಯ್ಯ ಕುರುಬರನ್ನು ದೇವೇಗೌಡರ ವಿರುದ್ಧ ಹೇಗೆ ಎತ್ತಿಕಟ್ಟಿದ್ದಾರೆಂದರೆ ಒಂದೆರಡು ತಿಂಗಳಲ್ಲಿ ಅದನ್ನು ಸರಿಪಡಿಸುವುದು ಅಸಾಧ್ಯವೇ ಸರಿ. ಹಾಗೇನಾದರೂ ನೆಲಮಟ್ಟದಲ್ಲಿ ಇದು ಸರಿಯಾಗುವ ಲಕ್ಷಣಗಳು ಕಂಡುಬಂದರೆ ಆಯಾ ಪಕ್ಷದ ಜನ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ತುಮಕೂರಿನಲ್ಲಿ ದೇವೇಗೌಡರಿಗೆ ಕಾಂಗ್ರೆಸ್ಸು ಸಹಕರಿಸಿದರೆ ಅಲ್ಲಿ ಶಾಶ್ವತವಾಗಿ ಕಾಂಗ್ರೆಸ್ಸು ಸತ್ತಂತೆ. ಅದಕ್ಕೆ ಪ್ರತಿಯಾಗಿ ಮೈಸೂರಿನಲ್ಲೇನಾದರೂ ಒಕ್ಕಲಿಗರು ಸಿದ್ದರಾಮಯ್ಯನೊಂದಿಗೆ ನಿಂತರೆ ಅಲ್ಲಿ ಅವರ ಪ್ರಾಬಲ್ಯ ಪೂರ್ಣ ಸತ್ತಂತೆ. ಹೀಗಾಗಿಯೇ ಈ ಬಾರಿಯ ಈ ಕದನ ಭಾಜಪಕ್ಕೆ ವರದಾನವಾಗಿ ಪರಿಣಮಿಸಿರೋದು. ನಿಸ್ಸಂಶಯವಾಗಿ ಪ್ರತಾಪ್ಸಿಂಹ ಈ ಗೊಂದಲದ ಲಾಭದಲ್ಲಿಯೇ ಜಯ ಗಳಿಸಿಬಿಡುತ್ತಾನೆ. ಅತ್ತ ಶೋಭಾ ಕರಂದ್ಲಾಜೆಯವರ ಕಥೆಯೂ ಭಿನ್ನವೇನಲ್ಲ. ಆಕೆಯ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನೆಲ್ಲಾ ಅಲ್ಲಿ ಕ್ಷೇತ್ರವನ್ನು ಗಳಿಸಿಕೊಂಡಿರುವ ಜೆಡಿಎಸ್ ನುಂಗಿಹಾಕಿಬಿಟ್ಟಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಪ್ರಮೋದ್ ಮಧ್ವರಾಜ್ ಜೆಡಿಎಸ್ನ ಅಭ್ಯಥರ್ಿಯಾಗಿ ನಿಂತಿರುವುದೇ ಅಚ್ಚರಿಗಳಲ್ಲೊಂದು. ತಿಪ್ಪರಲಾಗ ಹೊಡೆದರೂ ಆತನನ್ನು ಚಿಕ್ಕಮಗಳೂರಿನ ಜನತೆ ಸ್ವೀಕರಿಸಲಾರದು. ಆಕ್ರೋಶದ ನಡುವೆಯೂ ಗೆಲುವು ಭಾಜಪದ್ದೇ. ಬೆಳಗಾವಿಯಲ್ಲೂ ಇದೇ ಸ್ಥಿತಿ ಇದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಆಡಳಿತ ವಿರೋಧಿ ಅಲೆಯನ್ನು ಭಾಜಪ ಪೂರ್ಣವಾಗಿ ಬಳಸಿಕೊಳ್ಳುವಂತೆ ಕಾಣುತ್ತಿದೆ. ಈ ಬಾರಿ ಕಲ್ಬುಗರ್ಿಯಲ್ಲಿ ಖಗರ್ೆಯ ಗೆಲುವು ಸುಲಭವಿಲ್ಲ. ಅತ್ತ ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಸೋಲಿನ ಮುನ್ಸೂಚನೆಯನ್ನು ಗ್ರಹಿಸಿರುವ ವೀರಪ್ಪಮೊಯ್ಲಿ ಒಕ್ಕಲಿಗರು ವೋಟು ಹಾಕದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂದು ಹೆದರಿಸಲು ಆರಂಭಿಸಿದ್ದಾರೆ. ಬಚ್ಚೇಗೌಡರ ಪರವಾಗಿ ಅನುಕಂಪದ ಅಲೆಯೂ ಜೋರಾಗಿರುವುದರಿಂದ ಅವರ ಗೆಲುವು ಈ ಬಾರಿ ಖಚಿತವಾಗಲಾರದು. ಕೋಲಾರದಲ್ಲೂ ಅಚ್ಚರಿಯ ಫಲಿತಾಂಶ ಬಂದರೆ ಗಾಬರಿಯಾಗಬೇಕಾಗಿಲ್ಲ!


ಒಟ್ಟಾರೆ ಹೋರಾಟದಲ್ಲಿ ಈ ಬಾರಿ ಬಲುದೊಡ್ಡ ನಷ್ಟವನ್ನು ಅನುಭವಿಸಲಿರುವುದು ಗೌಡರ ಕುಟುಂಬವೇ. ಪೂರ್ಣ ಪರಿವಾರವನ್ನೇ ಅವರು ರಾಜಕೀಯಕ್ಕೆ ತಳ್ಳಿದ್ದಾರೆ. ಬೆಂಗಳೂರು ಉತ್ತರವನ್ನು ಒಬ್ಬ ಸಮರ್ಥ ಜೆಡಿಎಸ್ ಕಾರ್ಯಕರ್ತನಿಗೆ ಬಿಟ್ಟುಕೊಟ್ಟಿದ್ದರೆ ಗೌರವವಾದರೂ ಉಳಿದಿರುತ್ತಿತ್ತು. ಹರಿವಾಣದಲ್ಲಿದ್ದ ಆ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಮರಳಿ ಕೊಟ್ಟು ಅವರು ಮಾಡಿಕೊಂಡಿರುವ ಯಡವಟ್ಟು ಸಾಮಾನ್ಯವಾದುದಲ್ಲ. ಉಡುಪಿ ಕ್ಷೇತ್ರವನ್ನು ಅವರು ಹಾಗೆಯೇ ಮಾಡಿಕೊಂಡರು. ಒಟ್ಟಿನಲ್ಲಿ ಅವರಿಗೆ ಗೆಲ್ಲಬೇಕಿದ್ದುದು ಮೂರು ಕ್ಷೇತ್ರ ಮಾತ್ರ. ಮತ್ತು ಇವಿಷ್ಟೂ ಪರಿವಾರಕ್ಕೆ ಸಂಬಂಧಪಟ್ಟ ಕ್ಷೇತ್ರಗಳು ಎಂಬುದನ್ನು ಯಾವ ಜೆಡಿಎಸ್ ಕಾರ್ಯಕರ್ತನೂ ಮರೆತಿಲ್ಲ. ಜಾತಿಯ ಸಮೀಕರಣವನ್ನೇ ಲೆಕ್ಕ ಹಾಕುವುದಾದರೆ ಸಿದ್ದರಾಮಯ್ಯನ ಪಾಳಯವನ್ನು ಒಕ್ಕಲಿಗರು ಧಿಕ್ಕರಿಸುವುದರಿಂದ ಮತ್ತು ಮೋದಿ ಎಂಬ ಅಲೆ ಸುನಾಮಿಯಾಗಿ ಎದ್ದಿರುವುದರಿಂದ ಅವರೆಲ್ಲರೂ ಈ ಬಾರಿ ಬುದ್ಧಿವಂತಿಕೆಯಿಂದ ಹೆಜ್ಜೆಯಿಡುತ್ತಾರೆಂಬ ಲೆಕ್ಕಾಚಾರ ಚುನಾವಣಾ ಪಂಡಿತರದ್ದು. ಈಗಾಗಲೇ ಮಂಡ್ಯವನ್ನು ಹೆಚ್ಚು-ಕಡಿಮೆ ಕಳೆದುಕೊಂಡಿರುವ ದಳ ಹಾಸನವನ್ನು ಉಳಿಸಿಕೊಳ್ಳುವುದು ಈ ಬಾರಿ ಕಷ್ಟವೇ. ಇನ್ನು ಅವರ ಪಾಲಿಗಿರುವುದು ತುಮಕೂರು ಮಾತ್ರ. ಆದರೆ ಅಲ್ಲಿ ಪ್ರತಿಪಕ್ಷಗಳು ಒಟ್ಟಾಗುತ್ತಿರುವ ಪರಿ ನೋಡಿದರೆ ಅಂದುಕೊಂಡಷ್ಟು ಸುಲಭಕ್ಕೆ ಅಲ್ಲಿಯೂ ಗೆಲುವು ದಕ್ಕಲಾರದು.


ಬಿಜೆಪಿಯ ಗೆಲುವಿನ ಓಟಕ್ಕೆ ತಡೆಯೊಡ್ಡಬಹುದಾಗಿದ್ದವರು ಮತ್ತ್ಯಾರೂ ಅಲ್ಲ ಸ್ವತಃ ಬಿಜೆಪಿಯವರೇ. ಟಿಕೆಟ್ ಹಂಚಿಕೆಯಲ್ಲಿ ಇವರು ಉಂಟುಮಾಡುತ್ತಿರುವ ಗೊಂದಲಗಳನ್ನು ನೋಡಿದರೆ ಕೊನೆಯ ಹಂತದಲ್ಲಿ ಇದೇ ಮುಳುವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಇವೆ. ಬೆಂಗಳೂರು ದಕ್ಷಿಣ ಎಂದಿದ್ದರೂ ಬಿಜೆಪಿಯ ಕ್ಷೇತ್ರವೇ ಆಗಿತ್ತು. ಸಹಜವಾಗಿಯೇ ತೇಜಸ್ವಿನಿ ಅನಂತ್ ಕುಮಾರ್ ಇಲ್ಲಿನ ಪ್ರತಿನಿಧಿಯಾಗುತ್ತಾರೆಂಬ ವಿಶ್ವಾಸ ಕಾಂಗ್ರೆಸ್ಸಿಗರಿಗೂ ಇತ್ತು. ಆಕೆಯ ವಿರುದ್ಧ ಸ್ಪಧರ್ಿಸಲು ಯಾರು ಮುಂದೆಯೂ ಬಂದಿರಲಿಲ್ಲ. ಕೊನೆಯ ಕ್ಷಣಕ್ಕೆ ಬಿ.ಕೆ ಹರಿಪ್ರಸಾದ್ರನ್ನು ಅವರು ಆಯ್ಕೆ ಮಾಡಿದ್ದು ಇದೇ ಕಾರಣಕ್ಕಾಗಿ. ಆದರೆ ಟಿಕೆಟ್ ಹಂಚಿಕೆಯ ಹೊತ್ತಿನಲ್ಲಿ ಎಡವಟ್ಟು ಮಾಡಿಕೊಂಡ ಬಿಜೆಪಿ ಮಧ್ಯರಾತ್ರಿ ಒಂದು ಗಂಟೆಗೆ ತೇಜಸ್ವಿಸೂರ್ಯನನ್ನು ಆಯ್ಕೆ ಮಾಡಿ ಅಭ್ಯಥರ್ಿ ಎಂದು ಘೋಷಿಸಿತು. ತೇಜಸ್ವಿ 28ರ ತರುಣ. ಆತನಿಗೆ ಕೊಟ್ಟಿದ್ದಕ್ಕೆ ಬಹುಶಃ ದೇಶದಾದ್ಯಂತ ಎಲ್ಲೂ ವಿರೋಧ ವ್ಯಕ್ತವಾಗಿಲ್ಲ. ಅನೇಕರು ಹೆಮ್ಮೆಯನ್ನನುಭವಿಸಿದ್ದಾರೆ. ಸ್ವತಃ ಕ್ಷೇತ್ರದಲ್ಲೇ ಅಸಮಾಧಾನಗಳೆದ್ದಿವೆ ಅಷ್ಟೇ. ಅನಂತ್ಕುಮಾರ್ರೊಂದಿಗೆ ಒಡನಾಟದಲ್ಲಿದ್ದ ಮತ್ತು ತೇಜಸ್ವಿನಿಯವರನ್ನು ಹತ್ತಿರದಿಂದ ಬಲ್ಲ ಸ್ಥಳೀಯರು ಈ ನಿಧರ್ಾರದಿಂದ ವಿಚಲಿತರಾದಂತೆ ಕಂಡುಬರುತ್ತಿದೆ. ಅಲ್ಲಿನ ಶಾಸಕರು ಚುನಾವಣೆಗೆ ಇಷ್ಟು ಕಡಿಮೆ ದಿನವಿರುವಾಗಲೂ ಇನ್ನೂ ಬೀದಿಗಿಳಿದು ಕೆಲಸ ಮಾಡದೇ ಇರುವುದನ್ನು ನೋಡಿದರೆ ಸುಲಭವಾಗಿದ್ದ ಗೆಲುವನ್ನು ಭಾಜಪವೇ ಕಷ್ಟಮಾಡಿಕೊಂಡಿತೇನೋ ಎನಿಸುತ್ತದೆ. ಬೆಂಗಳೂರು ದಕ್ಷಿಣ ಎಂದಿದ್ದರೂ ಭಾಜಪದ್ದೇ ಕ್ಷೇತ್ರ. ಕೊನೆಯ ಕ್ಷಣದಲ್ಲೂ ಅದನ್ನು ಗೆಲ್ಲುವುದು ಸಾಧ್ಯ, ಆದರೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ ಎಲ್ಲರನ್ನೂ ಸರಿದೂಗಿಸಿ ಜೊತೆಗೊಯ್ಯಬಲ್ಲ ಸಮರ್ಥರು ತೇಜಸ್ವಿಯೊಂದಿಗೆ ನಿಲ್ಲಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡದಿದ್ದರೆ ಸಮಸ್ಯೆಗಳು ಎದುರಾಗೋದೇ ಹೀಗೆ. ಇದೇ ಬಗೆಯ ಸಮಸ್ಯೆ ಕೊಪ್ಪಳದಲ್ಲಿದೆ, ಚಿಕ್ಕೋಡಿಯಲ್ಲಿದೆ. ಸ್ವಲ್ಪ ಎಡವಟ್ಟಾದರೂ ಕೈಗೆ ಬಂದ ತುತ್ತನ್ನು ಕಳೆದುಕೊಳ್ಳುವ ಭೀತಿ ಇದ್ದೇ ಇದೆ.


ಇವೆಲ್ಲದರ ನಡುವೆ ಸಿದ್ದರಾಮಯ್ಯ ಮಂಡ್ಯ, ಹಾಸನಗಳಲ್ಲಿ ವ್ಯಾಪಕ ಪ್ರಚಾರಕ್ಕಿಳಿದು ದೇವೇಗೌಡರು ಮತ್ತು ಅವರ ಕುಟುಂಬ ಮೈಸೂರಿನಲ್ಲಿ ರಂಗಕ್ಕಿಳಿದು ಪೂತರ್ಿ ತೊಡಗಿಕೊಂಡರೆ ಭಾಜಪದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಬಹುದು. ಸಿದ್ದರಾಮಯ್ಯನವರಿಗೆ ದೇವೇಗೌಡರ ಕುಟುಂಬದ ಮೇಲಿರುವ ದ್ವೇಷವನ್ನು ಕಂಡರೆ ಸಧ್ಯಕ್ಕಂತೂ ಆ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ದೃಷ್ಟಿಯಿಂದಲೇ ದೇಶದ ಎಲ್ಲ ಸಮೀಕ್ಷೆಗಳು ಕನರ್ಾಟಕದಲ್ಲಿ 15 ಸೀಟುಗಳು ಮಾತ್ರ ಬರಲು ಸಾಧ್ಯ ಎನ್ನುವಾಗಲೂ 18 ರಿಂದ 22ರವರೆಗೆ ಈ ಸಂಖ್ಯೆ ದಾಟಬಹುದು ಎಂಬುದನ್ನು ಬಲ್ಲವರು ಹೇಳುತ್ತಿರೋದು. ಹೇಗೇ ಇರಲಿ ನರೇಂದ್ರಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕೆ ನಮ್ಮೆಲ್ಲರ ಅಹಂಕಾರಗಳು ಬದಿಗೆ ದೂಡಲ್ಪಟ್ಟು ಪ್ರತಿ ಕ್ಷೇತ್ರವನ್ನೂ ಗೆಲ್ಲುವಂತಾಗಬೇಕು. ಜನರ ಆಕಾಂಕ್ಷೆ ಹೀಗೆಯೇ ಇದೆ. ಪಕ್ಷ ಪೂರಕವಾಗಿ ಪ್ರತಿಸ್ಪಂದಿಸುವುದಷ್ಟೇ ಆಗಬೇಕಾಗಿದೆ.

– ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    March 30, 2019 at 3:42 am

    ಮುದ್ದ ಹನುಮೇಗೌಡರನ್ನು ಬಿಜೆಪಿ ನಂಬಿತ್ತೆ?
    ಹಾಗೇ ಸುಮಲತನ ಬಡಿಯಲೂ ಕುಮಾರಸ್ವಾಮಿ ತಮ್ಮ ಎಲ್ಲಾ ಅಸ್ತ್ರಗಳ ಪ್ರಯೋಗ ಮಾಡ್ತಾರೆ. ಸುಮಲತಾ ಹಿಂದೆ ಸರಿದರೆ ಎನು ಗತಿ? ನಮ್ಮ ಆಶಯದ ಮತ್ತು ದೇಶದ ಭವಿಷ್ಯ?

Leave a Reply

Your email address will not be published. Required fields are marked *

Most Popular

To Top