National

ಎಕ್ಸಿಟ್ ಪೋಲ್ ನೋಡಿ ನಂಜು ಕಾರುತ್ತಿರುವವರು!!

ನಿನ್ನೆ ಎಲ್ಲಾ ಪ್ರಮುಖ ಸುದ್ದಿ ಮಾಧ್ಯಮಗಳು ತಾವುಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ದೇಶದ ಮುಂದಿರಿಸಿವೆ. ಎಲ್ಲ ಸಮೀಕ್ಷೆಗಳೂ ಬಿಜೆಪಿ ಬಹುಮತ ಪಡೆಯುವುದನ್ನು ಮತ್ತು ಎನ್ ಡಿ ಎ ಎರಡನೆಯ ಅವಧಿಯಲ್ಲಿ ಸರ್ಕಾರ ರಚಿಸುವುದನ್ನು ಸ್ಪಷ್ಟಗೊಳಿಸಿವೆ. ಸಿಎನ್ ಎನ್ ಎನ್ ಡಿ ಎ ಗೆ 336, ಯುಪಿಎಗೆ 82 ಸೀಟುಗಳು ಬರುಬಹುದೆಂದು ಹೇಳಿದರೆ, ಟೈಮ್ಸ್ ನೌ ಎನ್ ಡಿ ಎಗೆ 306 ಮತ್ತು ಯುಪಿಎಗೆ 132 ಸೀಟುಗಳು ಬರುಬಹುದೆಂದು ತಿಳಿಸಿದೆ. ಇನ್ನು ರಿಪಬ್ಲಿಕ್ ಟಿವಿಯ ಸಮೀಕ್ಷೆಯ ಪ್ರಕಾರ ಎನ್ ಡಿಎ ಗೆ 287, ಯುಪಿಎಗೆ 128 ಸೀಟುಗಳು ಬರಬಹುದೆಂದು ಊಹಿಸಿವೆ.

ಒಟ್ಟಾರೆ ಎಲ್ಲಾ ಸಮೀಕ್ಷೆಗಳು ದೇಶದಲ್ಲಿ ಮೋದಿ ಅಲೆ ಮತವಾಗಿ ಮಾರ್ಪಟ್ಟಿದ್ದನ್ನು ಸ್ಪಷ್ಟಪಡಿಸಿವೆ. ಬಿಜೆಪಿ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುವ ಪ್ರಯತ್ನದಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದೆ. ಇನ್ನು ತಾತನಂತೆ, ಅಜ್ಜಿಯಂತೆ ಎಂದು ಹೇಳಿಕೊಂಡು, ಪದೇ ಪದೇ ರಫೇಲ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿಸುತ್ತಾ, ಪ್ರಧಾನಮಂತ್ರಿಯವರನ್ನು ಚೋರ್ ಎಂದು ಕರೆದು, ತಾನು ಜನಿವಾರಧಾರಿ ಹಿಂದೂ ಎಂದು ಹೇಳಿಕೊಂಡ ಯಾವ ನಾಟಕಗಳೂ ಜನರನ್ನು ಮರಳುಮಾಡಿಲ್ಲವೆಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲ, ಐದು ಪೀಳಿಗೆಯ ಸಾರ್ವಜನಿಕ ಜೀವನದ ಅನುಭವವಿರುವ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಕಾಂಗ್ರೆಸ್ಸನ್ನು ರಾಷ್ಟ್ರಮಟ್ಟದಲ್ಲಿ ಮೇಲೆತ್ತುವಲ್ಲಿ ಸೋತಿದ್ದಾರೆ ಎಂಬುದನ್ನು ಸಮೀಕ್ಷೆಗಳು ಹೊರಹಾಕಿವೆ!

ಈ ಸಮೀಕ್ಷೆಗಳು ನಿನ್ನೆ ಹೊರಬೀಳುತ್ತಿದ್ದಂತೆ ಜನರ ಮುಂದೆ ಬೆತ್ತಲಾದವರು ಈ ದೇಶದ ಬುದ್ಧಿಜೀವಿಗಳು. ಈ ಸಮೀಕ್ಷೆಗಳನ್ನು ನೋಡಿ ತಮ್ಮ ಹತಾಶೆಯನ್ನು ಟ್ವಿಟರ್ ನಲ್ಲಿ ಹೊರಹಾಕಿದ್ದಾರೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಅವರು ಸಮೀಕ್ಷೆಯನ್ನು ನೋಡಿ ಅದೆಷ್ಟು ತಲೆಕೆಡಿಸಿಕೊಂಡಿದ್ದಾರೆಂದರೆ ತಮ್ಮ ಟ್ವಿಟರ್ ಖಾತೆಯಲ್ಲಿ ‘ಪ್ರತಿ ಸಮೀಕ್ಷೆಯೂ ತಪ್ಪಾಗಿರಲು ಸಾಧ್ಯವಿಲ್ಲ! ಟಿವಿಯನ್ನು ಆರಿಸಿ, ಸಾಮಾಜಿಕ ಮಾಧ್ಯಮಗಳಿಂದ ಹೊರಬರುವ ಸಮಯವಿದು. 23ರಂದು ಜಗತ್ತು ತನ್ನ ಕಕ್ಷೆಯಲ್ಲಿ ಸುತ್ತುವುದೋ ಎಂಬುದನ್ನು ಕಾದು ನೋಡಬೇಕಿದೆ’ ಎಂದು ಟ್ವೀಟ್ ಮಾಡಿದ್ದಾರೆ!

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪಕ್ಷವನ್ನು, ಪ್ರಧಾನಿ ನರೇಂದ್ರಮೋದಿಯವರನ್ನು ಹಳಿಯುತ್ತಾ ಜಾಗತಿಕ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿರುವ ಬರ್ಖಾ ದತ್ ಕಾಂಗ್ರೆಸ್ಸಿನ ‘ನಾಯಕತ್ವ’ವನ್ನು ದೂಷಿಸಿದ್ದಾರೆ. ‘ರಾಷ್ಟ್ರೀಯ ನಾಯಕತ್ವದ ಕೊರತೆ ಅಂದರೆ ಅದು ಮೋದಿಯವರಿಗೆ ಲಾಭ. ನನ್ನ ಮಾತುಗಳು ತಪ್ಪಾಗಿರಬಹುದು ಆದರೆ ಮೋದಿಯವರು ಪ್ರಧಾನಿಯಾಗಲು ಒಳ್ಳೆಯ ಅವಕಾಶವಿತ್ತೆಂದು’ ಟ್ವೀಟ್ ಮಾಡಿ ಮೋದಿಯಲ್ಲದೇ ಮತ್ಯಾರು ಎಂಬುದೇ ಈ ಬಾರಿ ಚುನಾವಣೆಯ ಮುಖ್ಯ ಕೇಂದ್ರವಾಗಿತ್ತೆಂಬ ಉದ್ದದ ಅಂಕಣವನ್ನೇ ಬರೆದಿದ್ದಾರೆ.

ಇನ್ನು ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿ ಖ್ಯಾತಿ ಪಡೆದಿರುವ ಪತ್ರಕರ್ತೆ ರಾಣಾ ಅಯೂಬ್ ಅವರು ಮಹಾರಾಷ್ಟ್ರದಲ್ಲಿ ರೈತರ ನೋವುಗಳು, ಹೋರಾಟಗಳು ಯಾವ ಪರಿಣಾಮವನ್ನೂ ಮಾಡಿಲ್ಲವೆಂದೂ ಮತ್ತು ಗುಜರಾತಿನ ಜನ ಎಂದಿಗೂ ತಮ್ಮ ಇಬ್ಬರು ಪ್ರಮುಖ ನಾಯಕರನ್ನು ಬಿಟ್ಟುಕೊಡುವುದಿಲ್ಲವೆಂದೂ ಅಸಂತೋಷವನ್ನು ಹೊರಹಾಕಿದ್ದಾರೆ.

ವೈರ್ ಎಂಬ ಎಡಪಂಥೀಯ ಚಿಂತನೆಗಳುಳ್ಳ ಪತ್ರಿಕೆಯ ಸ್ಥಾಪಕರಲ್ಲಿ ಒಬ್ಬರಾಗಿರುವ ಸಿದ್ಧಾರ್ಥ್ ಭಾಟಿಯಾ ಅವರು ಎಕ್ಸಿಟ್ ಪೋಲುಗಳನ್ನು ನಂಬಲು ಸಾಧ್ಯವೇ ಇಲ್ಲವೆಂದಿದ್ದಾರೆ. ಅವು ಯಾವ ಉದ್ದೇಶಗಳನ್ನೂ ಹೊಂದಿಲ್ಲವೆಂದೂ, ಸುದ್ದಿವಾಹಿನಿಗಳು ಜನರ ಮನರಂಜನೆಗಾಗಿಯೇ ಇವುಗಳನ್ನು ಮಾಡುವುದೆಂದೂ ಆರೋಪಿಸಿದ್ದಾರೆ. ಜೊತೆಗೆ ಎಷ್ಟೋ ಬಾರಿ ಸಮೀಕ್ಷೆಗಳು ಸುಳ್ಳಾಗುವುದಕ್ಕೆ 1999 ಮತ್ತು 2004ರ ಸಮೀಕ್ಷೆಗಳು ಉತ್ತಮ ಉದಾಹರಣೆ ಎಂದಿದ್ದಾರೆ!

ಕೆಲವು ಪತ್ರಕರ್ತರಂತೂ ತಾವೇ ಸಮೀಕ್ಷೆಯನ್ನು ನಡೆಸಿರುವ ವರದಿಯನ್ನು ನೀಡಿದ್ದಾರೆ. ಮಾಧವನ್ ನಾರಾಯಣ್ ಅವರು ತನ್ನ ಸಮೀಕ್ಷೆಯ ಪ್ರಕಾರ ಎನ್ ಡಿ ಎ ಗೆ 210 ರಿಂದ 235 ಸೀಟುಗಳು ಬರಬಹುದೆಂದು ಟ್ವೀಟ್ ಮಾಡಿದ್ದಾರೆ. ಸಂಜಯ್ ಹೆಗ್ಡೆಯಂತಹ ಪತ್ರಕರ್ತರು ಮಾಧ್ಯಮಗಳ ಸಮೀಕ್ಷೆಯನ್ನು ನೋಡಿ ಕಾಲಹರಣ ಮಾಡದಿರುವುದು ಒಳಿತೆಂದು ಹೇಳಿ ತಮ್ಮ ನೋವನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಪಿ. ಚಿದಂಬರಂ ಅವರು ಚುನಾವಣಾ ಆಯೋಗ ತನ್ನ ಸ್ವಾತಂತ್ರ್ಯವನ್ನು ಮತ್ತು ಅಧಿಕಾರವನ್ನು ಸಂಪೂರ್ಣವಾಗಿ ಶರಣಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಮೀಕ್ಷೆಗಳನ್ನು ಗಾಳಿಸುದ್ದಿ ಎಂದದ್ದಲ್ಲದೇ, ಇವಿಎಮ್ ಗಳನ್ನು ಬದಲಾಯಿಸಲು ಅಥವಾ ಉಪಯೋಗಿಸಿಕೊಳ್ಳಲೆಂದೇ ಈ ಗಾಳಿಸುದ್ದಿಗಳನ್ನು ಹಬ್ಬಿಸಲಾಗಿದೆ ಎಂದಿದ್ದಾರೆ. ‘ಎಲ್ಲಾ ಪಕ್ಷಗಳು ಒಟ್ಟಾಗಿ ಮತ್ತು ಧೈರ್ಯದಿಂದಿರಬೇಕು. ಈ ಯುದ್ಧದಲ್ಲಿ ನಾವು ಒಟ್ಟಾಗಿ ಹೋರಾಡೋಣ’ ಎಂದು ಮಹಾಘಟಬಂಧನದ ನಾಯಕರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ!

ಮಾಧ್ಯಮಗಳು ನರೇಂದ್ರಮೋದಿಯವರು ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲಿಲ್ಲ. ಬದಲಿಗೆ, ಸದಾ ಮೋದಿಯವರ ಕುರಿತು, ಪಕ್ಷದ ಕುರಿತು ಸುಳ್ಳು ಸುದ್ದಿಗಳನ್ನು ಹರಡುವ, ಸುಳ್ಳುಗಳನ್ನು ಸತ್ಯವಾಗಿಸುವ ಕಾಯಕದಲ್ಲಿ ನಿರತವಾಗಿದ್ದವು. ಈ ಎಲ್ಲಾ ಬುದ್ಧಿಜೀವಿಗಳು ಸುದ್ದಿಮಾಧ್ಯಮಗಳಿಗೆ ತಮ್ಮ ಸುಳ್ಳಿನ ಆಹಾರವನ್ನೇ ಉಣಬಡಿಸುತ್ತಿದ್ದರು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗ್ಯೂ ಅದೇ ಮಾಧ್ಯಮಗಳು ಈ ಬಾರಿ ಮತ್ತೊಮ್ಮೆ ಮೋದಿಯವರು ಗದ್ದುಗೆ ಏರುವುದನ್ನು ಊಹಿಸಿವೆ. ರಾಷ್ಟ್ರದ ಮಿಡಿತವನ್ನು ಜನರ ಮುಂದಿರಿಸಿದೆ. 23ರಂದು ಫಲಿತಾಂಶ ಹೊರಬರುತ್ತಿದ್ದಂತೆ ಎಷ್ಟು ಬುದ್ಧಿಜೀವಿಗಳು ಪಕ್ಷ ಬದಲಿಸಿರುತ್ತಾರೆ, ಎಷ್ಟು ಜನ ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಯನ್ನು ಡಿಲೀಟ್ ಮಾಡಿಕೊಂಡಿರುತ್ತಾರೆಂದು ಕಾದು ನೋಡಬೇಕಿದೆ!

Click to comment

Leave a Reply

Your email address will not be published. Required fields are marked *

Most Popular

To Top