State

ಉತ್ತರ ಕರ್ನಾಟಕದ ಪ್ರವಾಹ ಮರೆತೇ ಬಿಟ್ಟಿರಾ?!

‘ಉತ್ತರ ಕನರ್ಾಟಕಕ್ಕೆ ಕಂಡು ಕೇಳರಿಯದ ಪ್ರವಾಹ ಬಂದಿತ್ತು’ ಎಂಬುದು ಹೆಚ್ಚು-ಕಡಿಮೆ ಮರೆತೇ ಹೋದ ಸಂಗತಿಯಾಗಿದೆ. ಸುಮಾರು ಹದಿನೈದಿಪ್ಪತ್ತು ದಿನಗಳ ಕಾಲ ಮುಖಪುಟದ ಸುದ್ದಿಯಾಗಿ ಮೆರೆದ ಪ್ರವಾಹ ಈಗ ಹೆಚ್ಚೂ-ಕಡಿಮೆ ಮಾಯವೇ ಆಗಿ ಹೋಗಿದೆ. ಹಾಗಂತ ಪ್ರವಾಹ ಪೀಡಿತರು ಹಳೆಯ ಬದುಕಿಗೆ ಮರಳಿದ್ದಾರಾ? ಉತ್ತರ ಹುಡುಕೋದು ಬಲು ಕಷ್ಟ. ಒಂದಂತೂ ಸತ್ಯ. ದಿನನಿತ್ಯದ ಅನ್ನದ ಸಮಸ್ಯೆ ಇದ್ದವನು ದೀರ್ಘಕಾಲ ಕೊಡುವವರ ಮುಂದೆ ಕೈಚಾಚಿ ಕುಳಿತುಕೊಳ್ಳಲಾರ. ಹೊಟ್ಟೆಯ ಸಂಕಟ ನೀಗಿಸಿಕೊಳ್ಳಲೆಂದು ಆತ ತನ್ನ ತಾನು ದುಡಿತಕ್ಕೆ ಒಡ್ಡಿಕೊಳ್ಳುತ್ತಾನೆ. ಈಗ ನೆರೆಯನ್ನು ಎಲ್ಲರೂ ಮರೆತಿರುವುದರಿಂದ ಒಂದಷ್ಟು ಸಂಗತಿ ಹಂಚಿಕೊಳ್ಳಲೇಬೇಕು. ಭೂಕಂಪ, ಪ್ರವಾಹ, ಬೆಂಕಿ ಅವಘಡ ಇವೆಲ್ಲವೂ ಮನುಷ್ಯನ ಬದುಕನ್ನು ಛಿದ್ರಗೊಳಿಸಿಬಿಡುತ್ತವೆ. ಜತನದಿಂದ ಕಟ್ಟಿಕೊಂಡು ಬಂದ ಮನೆ-ಮಠ ಹೊಲ-ಗದ್ದೆಗಳನ್ನೆಲ್ಲಾ ನೋಡಲೂ ಸಿಗದಂತೆ ಮಾಡಿಬಿಡುತ್ತದೆ. ಭುಜ್ನ ಭೂಕಂಪವಾದ ಸ್ಥಳಕ್ಕೆ ಈಗ ಹೋದರೂ ಆ ವಿನಾಶದ ಒಂದು ತುಣುಕು ಖಂಡಿತ ನೋಡಸಿಗುತ್ತದೆ! ಪ್ರಕೃತಿಯನ್ನು ನಾವು ಶೋಷಿಸುತ್ತೇವೆ ನಿಜ, ಆದರೆ ಒಮ್ಮೆ ಅದು ಸಣ್ಣಗೆ ಕಂಪಿಸಿದರೂ ನಾವು ಬದುಕುವುದೇ ದುಸ್ಸಾಧ್ಯವಾಗಿಬಿಡುತ್ತದೆ. ಪ್ರಕೃತಿಗೆ ಬಡವ-ಸಿರಿವಂತನೆಂಬ ಭೇದವಿಲ್ಲವಾದ್ದು ನಿಜವಾದರೂ ಹಣವುಳ್ಳವನು ತನ್ನ ಜೀವನವನ್ನು ಬಲುಬೇಗ ಮರು ನಿಮರ್ಿಸಿಕೊಂಡುಬಿಡುತ್ತಾನೆ. ಬಡವನ ಕಥೆ ಅರಣ್ಯರೋದನ. ಆತನ ನೋವನ್ನು ಮುಂದಿರಿಸಿಕೊಂಡು ಶಕ್ತರು ಎಲ್ಲ ಅನುಕೂಲಗಳನ್ನೂ ಪಡೆದುಕೊಂಡುಬಿಡುತ್ತಾರೆ. ಈತ ಮಾತ್ರ ಈ ಎಲ್ಲಾ ದುಃಖಗಳಿಗೆ ರೂಪದಶರ್ಿಯಾಗಿ ನಿಂತುಬಿಡುತ್ತಾನೆ ಅಷ್ಟೇ!

ನಾವೂ ಹಾಗೆಯೇ. ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಈ ಎಲ್ಲಾ ದುಃಖದ ಸುದ್ದಿ ಬರುವವರೆಗೂ ನಮ್ಮ ಮನಸ್ಸು ಸ್ಪಂದಿಸುತ್ತಿರುತ್ತದೆ. ಒಮ್ಮೆ ಮುಖ್ಯವಾಹಿನಿಗಳಲ್ಲಿ ಇವುಗಳು ಕಾಣೆಯಾದವೆಂದರೆ ನಮ್ಮ ಮನಸ್ಸಿನಲ್ಲೂ ಅವಕ್ಕೆ ಜಾಗವೇ ಇಲ್ಲ. ಹೀಗಾಗಿಯೇ ನೊಂದವರಿಗೆ ಪರಿಹಾರ ನೀಡುವ ಧಾವಂತ ಎಲ್ಲರಲ್ಲೂ ಆಕ್ಷಣದ ಉನ್ಮತ್ತತೆಯ ರೂಪದಲ್ಲಿ ಕಂಡು ಬರುತ್ತದಲ್ಲಾ, ಅದು ಮುಂದಿನ ಆರೆಂಟು ತಿಂಗಳುಗಳಿಗೆ ವಿಸ್ತಾರವಾಗಿಬಿಟ್ಟರೆ ಪರಿಹಾರ ನೀಡಲು ಸಕರ್ಾರವೇ ಬೇಕಾಗಿಲ್ಲ. ಉತ್ತರ ಕನರ್ಾಟಕದ ಪ್ರವಾಹದ ಹೊತ್ತಲ್ಲಿ ಎಲ್ಲರೂ ಎಷ್ಟು ಬೇಗಬೇಗನೇ ಪರಿಹಾರವನ್ನು ಕಳಿಸಿದ್ದರೆಂದರೆ ಸಿಕ್ಕವರಿಗೆ ಮತ್ತಷ್ಟು ಸಿಕ್ಕಿ, ಕೆಲವೊಂದು ವಸ್ತುಗಳ ಮೇಲೆ ಅವರಿಗೂ ವಾಕರಿಕೆ ಬಂದು, ಕೆಲವೊಮ್ಮೆ ಕೊಟ್ಟದ್ದನ್ನು ಬೇಡವೆನ್ನುತ್ತಾ, ಹೆಚ್ಚಿದ್ದುದನ್ನು ಮಾರಾಟ ಮಾಡುತ್ತಾ ಆರಂಭದ ದಿನಗಳನ್ನು ಕಳೆದುಬಿಟ್ಟರು! ಇವುಗಳ ನಡುವೆಯೇ ಹೀಗೆ ದೂರದಿಂದ ಬಂದ ವಸ್ತುಗಳನ್ನು ಒಂದೆಡೆ ಗುಡ್ಡೆ ಹಾಕಿ ಆನಂತರದ ದಿನಗಳಲ್ಲಿ ಅದನ್ನು ಮಾರಾಟ ಮಾಡಿಕೊಂಡ ಲೂಟಿಕೋರರೂ ನಮ್ಮ ನಡುವೆಯೇ ಇದ್ದಾರೆ.


ಸಕರ್ಾರ ಯಾವುದೇ ಇರಲಿ ಕೇಂದ್ರವಾಗಲಿ, ರಾಜ್ಯವೇ ಆಗಲಿ ಈ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಇನ್ನೂ ಹೆಚ್ಚಿನ ಸಾಮಥ್ರ್ಯ ತೋರಬೇಕಾದ ಅಗತ್ಯವಂತೂ ಖಂಡಿತ ಇದೆ. ಪ್ರಾಕೃತಿಕ ವಿಕೋಪದ ಹೊತ್ತಿನಲ್ಲಿ ಸಮಸ್ಯೆಗಳನ್ನು ನಿಭಾಯಿಸಲು ರಾಷ್ಟ್ರವಿನ್ನೂ ಸಮರ್ಥವಾಗಬೇಕಿದೆ. ಕುಳಿತಲ್ಲಿಂದ ಫ್ಲಿಪ್ಕಾಟರ್್ನಲ್ಲಿ ನಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತೇವೆ. ಬೇಕಾದ ಜಾಗದಿಂದ ಮತ್ತೆಲ್ಲಿಗೋ ಹೋಗಲು ಬೌನ್ಸ್ ಗಾಡಿಗಳನ್ನು ಬಳಸುವ ವ್ಯವಸ್ಥೆ ನಮಗಿದೆ. ಜಗತ್ತಿನ ಯಾವ ಮೂಲೆಗೆ ಬೇಕಿದ್ದರೂ ಸಂಪರ್ಕ ಸಾಧಿಸುವ ಶಕ್ತಿಯನ್ನೂ ಪಡೆದುಕೊಂಡಿದ್ದೇವೆ. ಆದರೆ, ಈ ರೀತಿಯ ವಿಕೋಪದ ಹೊತ್ತಲ್ಲಿ ಯಾರಿಗೆ ಏನಾಗಿದೆ, ಹಾನಿಯ ಪ್ರಮಾಣವೇನು, ತಕ್ಷಣಕ್ಕೆ ಮಾಡಬಹುದಾದುದೇನು ಎಂದು ತಿಳಿದುಕೊಳ್ಳುವ ವ್ಯವಸ್ಥೆ ರೂಪಿಸುವಲ್ಲಿ ಸೋತುಬಿಟ್ಟಿದ್ದೇವೆ. ಬೇರೆಲ್ಲಾ ವಿಕೋಪಗಳ ಬಗ್ಗೆ ಗೊತ್ತಿಲ್ಲ, ಆದರೆ ಈ ಬಾರಿಯ ಪ್ರವಾಹದ ಪರಿಸ್ಥಿತಿಯನ್ನಂತೂ ವ್ಯವಸ್ಥಿತವಾಗಿ ನಿಭಾಯಿಸುವುದು ಸಾಧ್ಯವಿತ್ತೇನೋ ಎನಿಸುತ್ತಿದೆ. ಏಕೆಂದರೆ ಪ್ರವಾಹ ಬರಬಹುದೆಂಬ ಮುನ್ಸೂಚನೆ ಖಂಡಿತವಾಗಿಯೂ ಎಲ್ಲರಿಗೂ ಇತ್ತು. ಹಂತ-ಹಂತವಾಗಿ ಅಣೆಕಟ್ಟುಗಳು ತುಂಬಿ ನೀರನ್ನು ಬಿಡುತ್ತಿರುವಾಗ ಅದು ಹರಿಯುವ ದಿಕ್ಕನ್ನು ಊಹಿಸುವುದು ಖಂಡಿತ ಸಾಧ್ಯವಿತ್ತು. ಆದರೆ ರಾಷ್ಟ್ರವಾಗಿ ಈ ವಿಚಾರದಲ್ಲಿ ನಾವು ಸೋತುಹೋದೆವು. ಹೋಗಲಿ ಸೂಕ್ತವಾಗಿ ತೊಂದರೆಗೊಳಗಾದವರನ್ನು ಗುರುತಿಸುವ ಪ್ರಯತ್ನ ಕೂಡ ಮಾಡಲಾಗಲಿಲ್ಲ. ಸಕರ್ಾರ ಬಿಡಿ, ಯಾವುದಾದರೂ ಊರಿಗೆ ನಾವುಗಳು ಹೋದಾಗಲೂ ಪರಿಹಾರ ಎಂಥವರಿಗೆ ಕೊಡಬೇಕೆಂಬುದನ್ನು ಊರಿನ ಪುಢಾರಿಯೇ ನಿಶ್ಚಯಿಸಿಬಿಟ್ಟಿರುತ್ತಿದ್ದ! ನಾವು ವ್ಯವಸ್ಥಿತವಾಗಿ ಅಧ್ಯಯನ ಮಾಡಿ ಸತ್ಪಾತ್ರರನ್ನು ಆಯ್ಕೆ ಮಾಡಿಕೊಂಡರಂತೂ ಆತನಿಗೆ ಕಂಠಮಟ್ಟ ಕೋಪ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ತನಗೆ ಬೇಕಾದವರಿಗೆ ವಸ್ತು, ಹಣ, ಮನೆ ಮೊದಲಾದ ಪರಿಹಾರ ಕೊಡಿಸುವುದಕ್ಕೆ ಈ ನೆರೆ ಅವನ ಪಾಲಿಗೆ ಒಂದು ವರ. ತಂತ್ರಜ್ಞಾನದ ಮೂಲಕ ಇಂತಹ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದು ಸಾಧ್ಯವಿದೆಯಾ ಎಂಬುದನ್ನು ಇಂದಿನ ತರುಣರು ಅಧ್ಯಯನ ಮಾಡಬೇಕಿದೆ. ವಿಕೋಪದ ಹೊತ್ತಲ್ಲಿ ಮೊಬೈಲ್ ಟವರ್ಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತವೆ. ಆ ಹೊತ್ತಿನಲ್ಲಿ ಹೆಗಲ ಮೇಲೆ ಟವರ್ ಅನ್ನು ಹಾಕಿಕೊಂಡು ಜನರಿಗೆ ಸಂಪರ್ಕ ಕಲ್ಪಿಸಿಕೊಡಬಲ್ಲ ಆವಿಷ್ಕಾರವೇನಾದರೂ ಮಾಡಬಹುದೇ? ಗೂಗಲ್ ಮ್ಯಾಪ್ಗಳು ಹೀಗೆ ಅಗಾಧವಾಗಿ ಬೆಳೆದಿರುವ ಕಾಲದಲ್ಲಿ ನಾವೇನಾದರೂ ಆದ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಆಯಾ ವ್ಯಕ್ತಿಗಳಿಗೆ, ಊರಿಗೆ ಸಲ್ಲುವಂತೆ ಮಾಡಬಹುದೇ? ಕೊನೆಗೆ ಆನ್ಲೈನ್ ಡಾಟಾಬೇಸ್ ಒಂದನ್ನು ನಿಮರ್ಿಸಿ ಯಾವ ಹಳ್ಳಿಯಲ್ಲಿ ಎಷ್ಟು ಜನಕ್ಕೆ ಸಮಸ್ಯೆಯಾಗಿದೆ ಎಂಬ ವಿವರವನ್ನು ಸಾರ್ವಜನಿಕವಾಗಿಸಿ ಆಯಾ ಊರಿಗೆ ಸಹಾಯ ಮಾಡಲು ಒಪ್ಪಿಕೊಂಡ ಸ್ವಯಂಸೇವಾ ಸಂಸ್ಥೆಗಳ ಉಲ್ಲೇಖವನ್ನೂ ಮಾಡಿಬಿಟ್ಟರೆ ಎಲ್ಲರೂ ಒಂದೇ ಕಡೆ ಧಾವಿಸುವುದು ತಪ್ಪುತ್ತದಲ್ಲಾ? ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಬಗೆಯ ವಿಪತ್ತು ನಿರ್ವಹಣೆಯ ಪ್ರಾಜೆಕ್ಟ್ಗಳನ್ನು ಮಕ್ಕಳ ಬಳಿ ಮಾಡಿಸಿದರೆ ಖಂಡಿತ ಅದು ರಾಷ್ಟ್ರಕ್ಕೆ ಒಳಿತಾಗಲಿದೆ. ಮೊನ್ನೆ ಯುವಾಬ್ರಿಗೇಡ್ ಬೆಳಗಾವಿಯಲ್ಲಿ ಆಯೋಜಿಸಿದ್ದ ಫಿಫ್ತ್ ಪಿಲ್ಲರ್ ಕಾರ್ಯಕ್ರಮದಲ್ಲಿ ಈ ಬಗೆಯ ಅನೇಕ ಚಚರ್ೆಗಳು ಅನೌಪಚಾರಿಕವಾಗಿ ಬಂದವು.


ಒಂದೆಡೆ ವಿಪತ್ತುಗಳ ನಿರ್ವಹಣೆಗೆ ತಂತ್ರಜ್ಞಾನ ಬಳಸಬೇಕು ಎನ್ನುವುದಾದರೆ, ಮತ್ತೊಂದೆಡೆ ನೋವಿನಲ್ಲಿದ್ದವರಿಗೆ ದಿರ್ಘಕಾಲದ ಪರಿಹಾರಕ್ಕೆ ನಾವು ಆಲೋಚಿಸಬೇಕೆಂಬುದೂ ಸತ್ಯ. ಶಿವಮೊಗ್ಗದಲ್ಲಿ ಪ್ರವಾಹದ ಹೊಡೆತಕ್ಕೆ ಗುಡಿಸಲನ್ನು ಕಳೆದುಕೊಂಡ ವೃದ್ಧದಂಪತಿಗಳಿಬ್ಬರು ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಸಕರ್ಾರದಿಂದ ಮನೆ ನಿಮರ್ಾಣಗೊಳ್ಳುವವರೆಗೂ ಅವರು ದೇವಸ್ಥಾನದಿಂದ ಹೊರಬರುವಂತಿರಲಿಲ್ಲ. ಪ್ರವಾಹ ಕಳೆದು ಎರಡು ತಿಂಗಳಾಗಿದೆ ಸರಿ. ಆದರೆ ಹೀಗೆಯೇ ಒಂದು ದೇವಸ್ಥಾನವಾದರೂ ವೃದ್ಧರಿಬ್ಬರಿಗೆ ಎಷ್ಟು ದಿನಗಳ ಕಾಲ ಅನ್ನ ಕೊಟ್ಟೀತು ಹೇಳಿ? ಹೋಗಲಿ ಹೀಗೆ ಮನೆ ಕಳಕೊಂಡ ಎಷ್ಟು ಜನಕ್ಕೆ ಸಕರ್ಾರವಾದರೂ ಮರು ಮನೆ ನಿಮರ್ಾಣ ಮಾಡೀತು ಹೇಳಿ? ಹೀಗಾಗಿ ಅರ್ಹರನ್ನು ಗುರುತಿಸಿ ಅಲ್ಲೊಂದು ಇಲ್ಲೊಂದಾದರೂ ಮನೆನಿಮರ್ಾಣ ಮಾಡಬೇಕೆಂಬ ಸಂಕಲ್ಪವನ್ನು ನಾಡಿನ ಕೆಲವು ತರುಣ ತರುಣಿಯರು ಮಾಡಿದ್ದು ಹೆಮ್ಮೆಯ ಸಂಗತಿಯೇ. ಬೆಳಗಾವಿಯ ಮೀರಮ್ಮ ಬಾಗ್ಬಾನ್ ಎಂಬ ಅಜ್ಜಿ ತನ್ನ ಮನೆಯನ್ನು ಪೂರ್ಣ ಕಳೆದುಕೊಂಡು ಬೀದಿಗೆ ಬಂದುಬಿಟ್ಟಿದ್ದರು. ತನ್ನನ್ನು ನೋಡಿಕೊಳ್ಳಬಲ್ಲ ವ್ಯಕ್ತಿಗಳೂ ಯಾರೂ ಇಲ್ಲದ್ದರಿಂದ ಆಕೆಯೂ ಅಸಹಾಯಕಳೇ ಆಗಿದ್ದಳು. ಆಕೆಗೊಂದು ಸೂರು ನಿಮರ್ಿಸಿಕೊಡುವ ಇಚ್ಛೆ ವ್ಯಕ್ತವಾದಾಗ ವೀಣಾ ಬನ್ನಂಜೆ ಮತ್ತವರ ಗೆಳೆಯರ ಬಳಗ ಬಲು ಆಸ್ಥೆಯಿಂದ ಜೊತೆಗೆ ನಿಂತಿತು. ಈಗಾಗಲೇ ಅಲ್ಲಿ ಈ ಕುರಿತ ಕೆಲಸ ಆರಂಭವಾಗಿದೆ. ಬಹುಶಃ ಇನ್ನು ಕೆಲವು ದಿನಗಳಲ್ಲಿ ಮನೆಯೂ ಪೂರ್ಣಗೊಂಡುಬಿಡುತ್ತದೆ. ಇತ್ತ ನಂಜನಗೂಡಿನಲ್ಲಿ ಕಪಿಲೆ ಉಕ್ಕಿ ಮನೆಗೆ ನುಗ್ಗಿದಾಗ ಅನೇಕರು ಗಾಬರಿಗೊಂಡಿದ್ದರು. ಆದರೆ ನೀರಿಳಿಯುತ್ತಿದ್ದಂತೆ ಬದುಕು ಸಹಜ ಸ್ಥಿತಿಗೆ ಮರಳಿತು. ಈ ಹೊತ್ತಲ್ಲಿ ಮನೆ ಕಳೆದುಕೊಂಡ ಒಂದು ಕುಟುಂಬ ಮಾತ್ರ ಹಳಿಗೆ ಮರಳಲೇ ಇಲ್ಲ! ಊರಿನ ಜನರ ನೋವನ್ನು ಆ ಊರಿನ ಜನರಲ್ಲದೇ ಮತ್ಯಾರು ಪರಿಹರಿಸಬೇಕು ಹೇಳಿ? ಹೀಗಾಗಿ ಅಲ್ಲಿನ ಯುವಾಬ್ರಿಗೇಡ್ ತಂಡ ದಾನಿಗಳನ್ನು ಜೊತೆಗೂಡಿಸಿಕೊಂಡು ಮನೆನಿಮರ್ಾಣ ಮಾಡಿಯೇಬಿಟ್ಟಿತು. ಈ ತಿಂಗಳ ಕೊನೆಯ ವೇಳೆಗೆ ಬಣ್ಣ ಬಳಿದು ನೆಲ ಹಾಸಿ ಆ ಮನೆಯನ್ನು ಹಸ್ತಾಂತರಿಸುತ್ತಿದ್ದಾರೆ. ಇವುಗಳೊಟ್ಟಿಗೆ ಮೊನ್ನೆ ನವೆಂಬರ್ 15ಕ್ಕೆ ಶಿವಮೊಗ್ಗದಲ್ಲಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ವೃದ್ಧದಂಪತಿಗಳಿಗೆ ಮನೆ ನಿಮರ್ಿಸಿ ಹಸ್ತಾಂತರಿಸಿಯೂ ಆಯ್ತು. ಆ ವೃದ್ಧ ದಂಪತಿಗಳನ್ನು ಆಯ್ಕೆ ಮಾಡಿದ್ದು ಅಲ್ಲಿನ ಸೋದರಿ ನಿವೇದಿತಾ ಪ್ರತಿಷ್ಠಾನದ ಒಂದಷ್ಟು ತಾಯಂದಿರು. ಅವರನ್ನು ಕಂಡು, ಇತರರ ಸಹಕಾರವಿಲ್ಲದೇ ಬಹುಶಃ ಜೀವನದಲ್ಲಿ ಮನೆ ಕಟ್ಟಿಕೊಳ್ಳುವುದು ಅವರಿಗೆ ಸಾಧ್ಯವೇ ಇಲ್ಲ ಎಂದು ಗುರಿತಿಸಿದ ಈ ಪಡೆ ಸಕರ್ಾರದ ಸಹಕಾರಕ್ಕೆ ಕಾಯದೇ ತಾನೇ ಮನೆಕಟ್ಟಿಕೊಡುವ ನಿಶ್ಚಯ ಮಾಡಿತು! ಅದಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದ್ದು ತುಮಕೂರಿನ ಸಹಕಾರ ಫೌಂಡೇಶನ್ ಎಂಬ ವಿದ್ಯಾಥರ್ಿಗಳ ಪಡೆ. ಸಮಾಜಕ್ಕೇನಾದರೂ ಮಾಡಬೇಕಂಬ ತುಡಿತವುಳ್ಳ ಈ ತುರುಣ ತರುಣಿಯರು ತಾವು ಸಂಗ್ರಹಿಸಿದ ಒಂದಿಷ್ಟು ಹಣವನ್ನು ಈ ಮನೆನಿಮರ್ಾಣಕ್ಕೆಂದು ಕಳಿಸಿಕೊಟ್ಟರು. ಸ್ಥಳೀಯರಿಂದ ವಸ್ತು ಮತ್ತು ಹಣದ ರೂಪದಲ್ಲಿ ದಾನವನ್ನು ಸಂಗ್ರಹಿಸಿ ಒಂದೂವರೆ ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಸುಂದರವಾದ ಮತ್ತು ಸರ್ವ ಸಜ್ಜಿತವಾದ ಮನೆಯನ್ನು ನಿಮರ್ಿಸಿ ‘ನಮ್ಮನೆ’ ಎಂದು ಹೆಸರಿಟ್ಟು ಅವರಿಗೆ ಕೊಡಲಾಯ್ತು. ಆ ಮನೆಯ ಒಳಕ್ಕೆ ಆ ವೃದ್ಧ ದಂಪತಿಗಳು ಹೋಗುವಾಗ ಅವರ ಕಂಗಳಲ್ಲಾಡಿದ ನೀರು ಕಣ್ಣಿಗೆ ಕಟ್ಟಿದಂತಿದೆ!

ಬರೀ ಇಷ್ಟೇ ಅಲ್ಲ. ಈ ಎರಡೂ ಸಂಘಟನೆಗಳು ನೊಂದವರಿಗೆ ಸಹಾಯ ಮಾಡಲೆಂದು 200ಕ್ಕೂ ಹೆಚ್ಚು ಪರಿವಾರಗಳನ್ನು ದಾನಿಗಳೊಂದಿಗೆ ನೇರಸಂಪರ್ಕ ಮಾಡಿಕೊಟ್ಟಿದೆ. ಪ್ರತೀ ತಿಂಗಳು 10,000 ರೂಪಾಯಿಯಂತೆ 6 ತಿಂಗಳಕಾಲ ದಾನಿಗಳೇ ನೇರವಾಗಿ ನೊಂದವರ ಅಕೌಂಟಿಗೆ ವಗರ್ಾಯಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಇದರ ಲಾಭವೇನು ಗೊತ್ತೇ? ದಾನಿಗಳು ಆ ಕುಟುಂಬಗಳೊಂದಿಗೆ ಸಂಪರ್ಕವಿರಿಸಿಕೊಳ್ಳುವುದಲ್ಲದೇ ಆ ಪರಿವಾರದ ಭವಿಷ್ಯದ ದುಃಖಕ್ಕೂ ಪರಿಹಾರವಾಗಿ ನಿಲ್ಲುತ್ತಾರೆ. ಮತ್ತು ಅವರು ಈ ಹೊತ್ತಿನಲ್ಲಿ ಕೊಟ್ಟ ಹಣ ಬದುಕನ್ನು ಪುನರ್ರೂಪಸಿಕೊಳ್ಳುವುದಕ್ಕೂ ಸಾಕಷ್ಟು ಸಹಾಯ ಮಾಡುತ್ತದೆ. ಶಿವಮೊಗ್ಗದಲ್ಲಿ ಪೊರಕೆ ತಯಾರಿಸಿ ಮಾರುತ್ತಿದ್ದ ವ್ಯಕ್ತಿಯೊಬ್ಬ ಪ್ರವಾಹದಲ್ಲಿ ಎಲ್ಲವನ್ನೂ ಕಳಕೊಂಡನಲ್ಲಾ, ಹೀಗೆ ಸಿಕ್ಕ ಹಣದಿಂದ ಆತ ಬದುಕನ್ನೇ ಪುನರ್ರೂಪಿಸಿಕೊಂಡಿದ್ದಾನೆ. ದುಃಖದ ಹೊತ್ತಿನಲ್ಲಿ ಕೈ ಹಿಡಿದ ಆ ಪರಿವಾರದ ಕುರಿತಂತೆ ಆತನ ಕೃತಜ್ಞತೆ ಬಣ್ಣಿಸಲಸದಳವಾದ್ದು. ಮೊನ್ನೆಗೆ ಅನೇಕರಿಗೆ ನಾಲ್ಕನೇ ತಿಂಗಳ ಕಂತೂ ಸೇರಿದೆ. ಇನ್ನೆರಡು ತಿಂಗಳ ಕಂತು ಸೇರಿದರೆ ಕೊಡುವವರ ಒಪ್ಪಂದ ಮುಗಿದಂತೆ. ಆದರೆ ಪ್ರೀತಿ ಮುಗಿಯಲಾರದ್ದು! ಈ ಹಿನ್ನೆಲೆಯಲ್ಲಿಯೇ ಪ್ರಕೃತಿ ವಿಕೋಪವೆಂಬುದು ನಮ್ಮ ನಡುವಿನ ಬಾಂಧವ್ಯವನ್ನು ಹೆಚ್ಚು ಗಟ್ಟಿಗೊಳಿಸಬೇಕು ಎಂದು ನಾವೆಲ್ಲಾ ಭಾವಿಸೋದು.

ಸಮಸ್ಯೆ ಬಂದಾಗ ಪರಿಹಾರಕ್ಕೆ ಹುಡುಕಾಡುವುದು ಅತ್ಯಂತ ಸಾಮಾನ್ಯರ ಲಕ್ಷಣ. ಆದರೆ ಸಮಸ್ಯೆ ಬರುವ ಮುನ್ನವೇ ಅದಕ್ಕೆ ಪರಿಹಾರ ಸಿದ್ಧ ಮಾಡಿಟ್ಟಿರುವುದು ಬುದ್ಧಿವಂತರ ನಡೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಸಮಸ್ಯೆ ಬರದೇ ಇರುವಂತೆ ತಡೆಯುವುದು ಶ್ರೇಷ್ಠರ ಲಕ್ಷಣ. ನಾವೀಗ ಮೊದಲನೇ ಯಾದಿಯಲ್ಲಿದ್ದೇವೆ. ಸ್ವಲ್ಪ ತಂತ್ರಜ್ಞಾನವನ್ನು ಬಳಸಿಕೊಂಡರೆ ಎರಡನೇ ಪಟ್ಟಿಗೆ ಸೇರುತ್ತೇವೆ. ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುವ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಶ್ರೇಷ್ಠರ ಪಟ್ಟಿಯಲ್ಲಿ ನಾವೂ ಒಬ್ಬರಾಗುತ್ತೇವೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top