National

ಉತ್ತರಕನ್ನಡದ ಆಸ್ಪತ್ರೆಯ ಕೂಗಿಗೆ ಮೊದಲ ಜಯ ದೊರಕಿದೆ!

ಉತ್ತರಕನ್ನಡಕ್ಕೆ ತುರ್ತು ಆಸ್ಪತ್ರೆ ಬೇಕೆಂದು ಕಳೆದವಾರ ಚೌಕಿದಾರ್ ಗಳು ಅಭಿಯಾನ ನಡೆಸಿದ್ದನ್ನು ‘ನಾನೀಗ ಚೌಕಿದಾರ’ ಪೇಜಿನಲ್ಲಿ ನೀವು ಗಮನಿಸಿದ್ದೀರಿ. ಜನರ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹೇಗೆ ಪ್ರತಿಧ್ವನಿಸಿತೆಂದರೆ ನೋಡ ನೋಡುತ್ತಲೇ ಅದು ಜನಾಂದೋಲನವಾಗಿ ಮಾರ್ಪಟ್ಟಿತು. ಆಸ್ಪತ್ರೆ ಉತ್ತರಕನ್ನಡಕ್ಕೆ ಎಷ್ಟು ಅಗತ್ಯವೆಂಬ ವಿಚಾರ ಪ್ರತಿಯೊಬ್ಬರೂ ತಮ್ಮ ಟ್ವೀಟ್ ಗಳಲ್ಲಿ ಪ್ರಸ್ತುತಪಡಿಸಿದ್ದನ್ನು, ಫೇಸ್ಬುಕ್ ಗಳಲ್ಲಿ ಹಂಚಿಕೊಂಡಿದ್ದನ್ನು ಗಮನಿಸಿದಾಗ ಇಷ್ಟೂ ದಿನ ಮತ್ತೆ ಮತ್ತೆ ಆಯ್ಕೆಯಾಗುತ್ತಿದ್ದ ಜನಪ್ರತಿನಿಧಿಗಳು ಮಾಡಿದ್ದಾದರೂ ಏನು ಎಂಬ ಪ್ರಶ್ನೆ ಮಾತ್ರ ಇಡಿಯ ರಾಜ್ಯ ಕೇಳಿಕೊಳ್ಳುವಂತೆ ಮಾಡಿತು.

ಈ ಅಭಿಯಾನ ಪಕ್ಷಾತೀತವಾಗಿ ನಡೆದಿದ್ದು ಬಲುವಿಶೇಷ. ಕಾಂಗ್ರೆಸ್ಸಿನ ದೇಶಪಾಂಡೆ ಜನರ ಆಕ್ರೋಶಕ್ಕೆ ಗುರಿಯಾದಷ್ಟೇ ಭಾಜಪದ ಅನಂತ್ ಕುಮಾರ್ ಹೆಗಡೆಯೂ ಬೈಗುಳಗಳಿಗೆ ಆಹಾರವಾದರು. ವಿಶ್ವೇಶ್ವರ ಹೆಗಡೆ ಕಾಗೇರಿಯ ಕುರಿತಂತೆ ಮಾತ್ರ ಆಕ್ಷೇಪಗಳು ಬಹಳ ಇರಲಿಲ್ಲ ಏಕೆಂದರೆ ಅವರದ್ದು ಮನಸ್ಸು ಮಾಡಿಯೂ ಏನೂ ಮಾಡಲಾಗದಂತಹ ವ್ಯಕ್ತಿತ್ವ ಎಂಬುದು ರಾಜ್ಯಕ್ಕೇ ಗೊತ್ತಿರುವಂಥದ್ದು. ಹೊಸದಾಗಿ ಆಯ್ಕೆಯಾದ ಶಾಸಕರು ಈ ನಿಟ್ಟಿನಲ್ಲಿ ಮೆಚ್ಚಬೇಕಾದ ಕೆಲಸವನ್ನೇ ಮಾಡಿದ್ದಾರೆ ಎನ್ನಬಹುದು.

ಆಕ್ರೋಶ ಭುಗಿಲೇಳುತ್ತಿದ್ದಂತೆ ಕಾರವಾರದ ಶಾಸಕಿ ರೂಪಾಲಿ ನಾಯಕ್ ಈ ಹಿಂದೆಯೇ ಈ ಕುರಿತಂತೆ ತಾನು ಬರೆದಿದ್ದ ಪತ್ರವೊಂದನ್ನು ಜನರ ಮುಂದಿಟ್ಟು ಪ್ರಶಂಸೆಗೆ ಒಳಗಾದರು. ಅತ್ತ ಕುಮಟಾದ ದಿನಕರ ಶೆಟ್ಟಿಯೂ ಈ ಹೋರಾಟಕ್ಕೆ ಪೂರ್ಣಬೆಂಬಲ ಎಂದದ್ದಲ್ಲದೇ ಸರ್ಕಾರ ಈ ಯೋಜನೆಯನ್ನು ತ್ವರಿತಗತಿಯಲ್ಲಿ ಮಾಡದೇ ಹೋದರೆ ಉದ್ಯಮಿ ಬಿ.ಆರ್. ಶೆಟ್ಟಿಯವರ ಮೂಲಕ ಮಾಡಿಸುವುದಾಗಿ ಪ್ಲಾನ್ ಬಿಯನ್ನೂ ಮುಂದಿಟ್ಟುಬಿಟ್ಟರು. ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿಯವರಿಗೆ ತಾವೂ ಒಂದು ಪತ್ರವನ್ನು ಬರೆದು ಜನಾಕ್ರೋಶದಿಂದ ಬಚಾವಾಗಿಬಿಟ್ಟರು. ಭಟ್ಕಳದ ಶಾಸಕ ಸುನೀಲ್ ನಾಯಕ್ ಮುಖ್ಯಮಂತ್ರಿಗಳನ್ನು ಈ ಕುರಿತಂತೆ ಭೇಟಿಮಾಡಿದ ಚಿತ್ರವನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಜನರೊಂದಿಗೆ ನಿಲ್ಲುವ ಭರವಸೆ ಕೊಟ್ಟರು.

ಸ್ಥಳೀಯ ಪತ್ರಿಕೆಗಳೂ ಕೂಡ ಇಡಿಯ ಆಂದೋಲನಕ್ಕೆ ವ್ಯಾಪಕವಾದ ಬೆಂಬಲವನ್ನು ವ್ಯಕ್ತಪಡಿಸಿ ವಿಸ್ತಾರವಾದ ಲೇಖನಗಳನ್ನು ಪ್ರಕಟಿಸಿದವು. ಜನಮಾಧ್ಯಮದಲ್ಲಿ ಪ್ರಕಟಗೊಂಡ ಪ್ರವೀಣ್ ಹೆಗ್ಡೆಯವರ ಲೇಖನ ಕಣ್ಣು ತೆರೆಸುವಂತಿದ್ದರೆ ಪತ್ರಕರ್ತ ಜೀಯು ಉದಯವಾಣಿಗೆ ಬರೆದ ಲೇಖನ ಜನಪ್ರತಿನಿಧಿಗಳಿಗೆ ಚಾಟಿಯೇಟು ಬೀಸಿದಂತಿತ್ತು.

ಈ ಎಲ್ಲದರ ಪರಿಣಾಮವಾಗಿ ಸ್ವತಃ ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿ ಸುಸಜ್ಜಿತ ಆಸ್ಪತ್ರೆಯೊಂದಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂದರಲ್ಲದೇ ಅದಕ್ಕಾಗಿ ಹಣ ಮಂಜೂರು ಮಾಡುವ ಭರವಸೆಯನ್ನು ನೀಡಿ ಹೋರಾಟಗಾರರ ಮನಸ್ಸನ್ನು ಗೆದ್ದರು. ಈ ನಡುವೆ ಮಾಜಿ ಮಂತ್ರಿ, ಫೈರ್ ಬ್ರ್ಯಾಂಡ್ ಅನಂತ್ ಕುಮಾರ್ ಹೆಗ್ಡೆ ಟ್ವಿಟರ್ ನಲ್ಲಿ ಆಕ್ರೋಶ ಕಾರಿಕೊಂಡ ಟ್ವೀಟಿಗರನ್ನು ಬ್ಲಾಕ್ ಮಾಡಿ ಬೆಂಕಿಯನ್ನೇ ಉಗುಳಿದರು. ಕುಮಾರಸ್ವಾಮಿಯವರು ನೀಡಿದ ಪ್ರತಿಸ್ಪಂದನೆಗೆ ಇದು ಪಕ್ಕಾ ವಿರುದ್ಧ ದಿಕ್ಕಿನಲ್ಲಿತ್ತು. ಇವೆಲ್ಲಕ್ಕೂ ಭಿನ್ನವಾಗಿ ಹಳಿಯಾಳದ ಶಾಸಕ, ಮಂತ್ರಿ ಆರ್.ವಿ ದೇಶಪಾಂಡೆಯವರು ಯಾವುದಕ್ಕೂ ಪ್ರತಿಕ್ರಿಯೆ ಕೊಡದೇ ಈಗಲೂ ಮುಗುಮ್ಮಾಗಿ ಉಳಿದು ಜಿಲ್ಲೆಯ ಜನರನ್ನು ಅಣಕಿಸುವಂತಿದ್ದಾರೆ.

ಜನರ ಚೌಕಿದಾರಿಕೆಯಿಂದಾಗಿ ರಾಜ್ಯ ಸರ್ಕಾರವೂ ಅನೇಕ ದಶಕಗಳ ಜನರ ಬೇಡಿಕೆಯನ್ನು ಈಡೇರಿಸಲು ಮನಸ್ಸು ಮಾಡಿದಂತಾಗಿದೆ. ಹಾಗಂತ ಚೌಕಿದಾರಿಕೆ ಇಲ್ಲಿಗೇ ನಿಲ್ಲುವಂತಿಲ್ಲ. ಪಕ್ಕದ ಶಿವಮೊಗ್ಗೆಯಲ್ಲಿ, ಹುಬ್ಬಳ್ಳಿಯಲ್ಲಿ, ಉಡುಪಿ-ಮಂಗಳೂರುಗಳಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳಿರುವಾಗ ಉತ್ತರಕನ್ನಡ ಮಾಡಿದ ಪಾಪವಾದರೂ ಏನು ಎಂದು ಕೇಳಲೇಬೇಕಾದ ಮತ್ತು ಹೋರಾಟವನ್ನು ಸೂಕ್ತ ಅಂತ್ಯ ಕಾಣುವಂತೆ ಮಾಡಬೇಕಾದ ಜವಾಬ್ದಾರಿ ಎಲ್ಲರದ್ದೂ ಇದೆ. ಹಾಗಂತ ಇದು ಯಾವುದೇ ಪಕ್ಷದ ಅಥವಾ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ. ಇದರಲ್ಲೂ ಯಾರದ್ದಾದರೂ ಪರ ಅಥವಾ ವಿರೋಧವಾಗಿ ಮಾತನಾಡುವವರಿಗೆ ಚೌಕಿದಾರರು ಉತ್ತರ ಕೊಡಬೇಕೆಂದಿಲ್ಲ. ಒಂದು ಸೆಲ್ಯೂಟ್ ಹೊಡೆದು ಕೆಲಸ ಮುಂದುವರೆಸಬೇಕಷ್ಟೇ.

ಇನ್ನು ಮುಂದೆ ಯಾವ ಶಾಸಕರು, ಸಂಸದರು ಜಿಲ್ಲೆಯ ಕಾರ್ಯಕ್ರಮಗಳಿಗೆ ಬಂದಾಗಲೂ ಚುನಾವಣೆಯ ಕಾಲದಲ್ಲಿ ಮೋದಿ ಮೋದಿ ಎಂದು ಕೂಗುತ್ತಿದ್ದಂತೆ ತುರ್ತು ಆಸ್ಪತ್ರೆ ಎಂದು ಕೂಗಬೇಕಿದೆ. ಆಗಲಾದರೂ ಇವರು ತುರ್ತು ಕೆಲಸಮಾಡಿ ಆಸ್ಪತ್ರೆ ತರುವರೋ ನೋಡೋಣ.

Click to comment

Leave a Reply

Your email address will not be published. Required fields are marked *

Most Popular

To Top