National

ಈ ಪರಿಯ ಅವಿಶ್ವಾಸ ಗೊತ್ತುವಳಿ ಹಿಂದೆಂದೂ ಆಗಿರಲಿಲ್ಲ!

ಬಿಜೆಪಿಯ ವಿರುದ್ಧ ತೆಲುಗು ದೇಶಂ‌ ಪಾರ್ಟಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿತ್ತು‌. ಕಾಂಗ್ರೆಸ್, ಆಪ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಟಿಡಿಪಿಗೆ ಬೆಂಬಲ‌ ಸೂಚಿಸಿದ್ದರು. ಆದರೆ ಬಿಜೆಡಿ‌ ಮತ್ತು ಶಿವ ಸೇನಾ ಅವಿಶ್ವಾಸ ಗೊತ್ತುವಳಿಯನ್ನು ಬಾಯ್ಕಾಟ್ ಮಾಡಿದವು. ಸದನದಲ್ಲಿ ಟಿಡಿಪಿ ಅವಿಶ್ವಾಸ ಗೊತ್ತುವಳಿಯ ಕಾರಣವನ್ನು ತಿಳಿಸಿತು. ನಂತರ ಮಾತಿಗೆ ನಿಂತಿದ್ದು ಕಾಂಗ್ರಸ್ಸಿನ ಅಧ್ಯಕ್ಷ, ಪ್ರಧಾನಿ ಅಭ್ಯರ್ಥಿ ರಾಹುಲ್!

ರಾಹುಲ್ ನಿನ್ನೆ ಪ್ರಧಾನಿಯವರೊಂದಿಗೆ 15 ನಿಮಿಷ ಚರ್ಚೆ ಮಾಡುವ ಸವಾಲನ್ನೆಸೆದಿದ್ದರು. ರಾಹುಲ್ ನ ಬಗ್ಗೆ ಚೆನ್ನಾಗಿಯೇ ತಿಳಿದಿರುವ ಟ್ವಿಟ್ಟರಿಗರು ಭೂಕಂಪ ಬರಲಿದೆ ಎಂಬುದನ್ನು ಟ್ರೆಂಡ್ ಮಾಡಿದ್ದರು. ನಿರುದ್ಯೋಗ, ಕಪ್ಪುಹಣದ ಕುರಿತು ತನ್ನ ಮಾತನ್ನು ಶುರುಮಾಡಿದರು ರಾಹುಲ್. ನರೇಂದ್ರಮೋದಿ, ಅಮಿತ್ ಶಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಅಪವಾದ ಮಾಡಿದರು. ಫ್ರಾನ್ಸಿನ ಪ್ರಧಾನಿಯೊಂದಿಗೆ ರಫೇಲ್ ಡೀಲ್ ನ ಕುರಿತು ತಾನು ಮಾತನಾಡಿರುವುದಾಗಿಯೂ ಹೇಳಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ರಾಹುಲ್ ಸುಳ್ಳು ಹೇಳುತ್ತಿರುವುದನ್ನು ಸಾಕ್ಷಿ ಸಮೇತ ಸಾಬೀತು ಪಡಿಸಿದರು. ರಾಹುಲ್ ಗೆ ಇದು ಮೊದಲನೇ ಮುಖಭಂಗ!

ಮಾತನ್ನು ಮುಗಿಸಿದ ರಾಹುಲ್ ನೇರವಾಗಿ ಪ್ರಧಾನಿ ಮೋದಿಯವರ ಬಳಿ ನಡೆದು ಸದನದಲ್ಲಿಯೇ ಅವರನ್ನು ಅಪ್ಪಿಕೊಂಡುಬಿಟ್ಟರು. ಸದನದಲ್ಲೇನಾಗುತ್ತಿದೆ ಎಂದು ಎಲ್ಲರೂ ಊಹಿಸುವಷ್ಟರಲ್ಲಿ ರಾಹುಲ್ ತಮ್ಮ ಸ್ಥಾನಕ್ಕೆ ಹಿಂದಿರುಗಿ ಬಂದು ಕುಳಿತಾಗಿತ್ತು. ನಂತರ ತನ್ನ ಪಕ್ಕದಲ್ಲಿಯೇ ಕುಳಿತಿದ್ದ ಜ್ಯೋತಿರಾದಿತ್ಯ ಸಿಂಧ್ಯಗೆ ಕಣ್ಣು ಹೊಡೆದ ರಾಹುಲ್ ನನ್ನು ಕ್ಯಾಮೆರಾ ಸೆರೆಹಿಡಿದುಬಿಟ್ಟಿತು. ಸೊಷಿಯಲ್ ಮಿಡಿಯಾ, ಮಾಧ್ಯಮಗಳಲ್ಲೆಲ್ಲಾ ತಮ್ಮ ಅಸಹ್ಯಕರ ನಡೆಗೆ ಅಪಹಾಸ್ಯಕ್ಕೀಡಾದರು ರಾಹುಲ್.‌ ಇದು ರಾಹುಲರಿಗಾದ ಎರಡನೆಯ ಮುಖಭಂಗ! ‘ರಾಹುಲ್ ರ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಪ್ರಧಾನಿಯಾದವರ ಬಳಿ ಸದನದಲ್ಲಿ ಹಾಗೆ ನಡೆದುಕೊಳ್ಳುವುದು ತಪ್ಪು’ ಎಂದು ಸ್ಪೀಕರ್ ಸುಮಿತ್ರಾ ಮಹಜನ್ ರಾಹುಲ್ ನಡೆಯನ್ನು ವಿರೋಧಿಸಿದರು. ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷ ಮುಖಭಂಗವನ್ನನುಭವಿಸಬೇಕಾಯ್ತು! ಇಲ್ಲಿಗೇ ಮುಗಿಯಲಿಲ್ಲ. ಫ್ರಾನ್ಸಿನ ಅಧ್ಯಕ್ಷರು ರಾಹುಲ್ ತಮ್ಮ ಬಳಿ ರಾಫೆಲ್ ಡೀಲ್ ಕುರಿತು ಯಾವುದೇ ರೀತಿಯ ಮಾತನಾಡಿಲ್ಲವೆಂದು ಹೇಳಿದ್ದಾರೆ. ಕಾಂಗ್ರೆಸ್ಸಿನಲ್ಲಿಯೇ ಕೆಲವರು ಅವಿಶ್ವಾಸ ಗೊತ್ತುವಳಿಯಿಂದ ದೂರವುಳಿಯುವುದಾಗಿ ಹೇಳಿದ್ದಾರೆ. ಪ್ರಧಾನಮಂತ್ರಿಗೆ ಸವಾಲನ್ನೆಸೆದು ಮುಖಭಂಗ ಮಾಡಲು ಕಾಯುತ್ತಿದ್ದ ರಾಹುಲ್ ತಾವೇ ಮುಖಭಂಗ ಅನುಭವಿಸಿದ್ದಾರೆ.

ನಂತರ ಮಾತನಾಡಿದ ಗೃಹಸಚಿವ ರಾಜ್ ನಾಥ್ ಸಿಂಗ್ 15 ವರ್ಷಗಳ ನಂತರ ಇದೇ ಮೊದಲ ಬಾರಿ ಅವಿಶ್ವಾಸ ಗೊತ್ತುವಳಿ ಆಗಿರುವುದು ಎಂದಿದ್ದಾರೆ. ರಾಜ್ ನಾಥ್ ಸಿಂಗ್ ಅವರು ಬಿಜೆಪಿಗಿರುವ ಜನರ ಬೆಂಬಲವನ್ನು ತಮ್ಮ ಮಾತುಗಳಲ್ಲಿ ಬಿಚ್ಚಿಡುತ್ತಾ ಸಾಗಿದರು. ದೇಶದಲ್ಲಾಗುತ್ತಿರುವ ವಿವಿಧ ಸಮಸ್ಯೆಗಳಿಗೆ ಎಲ್ಲ‌ ಪಕ್ಷಗಳು ಒಟ್ಟಾಗಿ ಬಂದು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದರು.

ರಾತ್ರಿ ತಮ್ಮ ಮಾತನ್ನು ಪ್ರಾರಂಭಿಸಿದ ಪ್ರಧಾನಮಂತ್ರಿ ನರೇಂದ್ರಮೋದಿಯವರು ‘ನಕಾರಾತ್ಮಕ ರಾಜನೀತಿ ಹೇಗೆ ವಿಕಾಸಕ್ಕೆ ಅಡ್ಡಿಯಾಗಿ‌ ನಿಂತಿದೆ ಎಂಬುದನ್ನು ಜನರಿಗೆ ಇಂದು ನೋಡುವ ಅವಕಾಶ ಸಿಕ್ಕಿದೆ’ ಎಂದರು. ಭಾರತದ ಅಷ್ಟೂ ಹಳ್ಳಿಗಳಿಗೆ ವಿದ್ಯುತ್ತನ್ನು ಒದಗಿಸಿದ್ದು, ಆಯುಷ್ಮಾನ್ ಭಾರತ್ ಹೀಗೆ ವಿವಿಧ ಯಶಸ್ಸುಗಳ ಬಗ್ಗೆ ಮೋದಿಯವರು ಮಾತನಾಡಿದರು.‌ ವಿರೋಧ ಪಕ್ಷಗಳು ಸರ್ಜಿಕಲ್ ಸ್ಟ್ರೈಕ್ ಅನ್ನು ಅನುಮಾನಿಸಿದ್ದನ್ನು ತೀವ್ರವಾಗಿ ವಿರೋಧಿಸಿದರು. ‘ಕಾಂಗ್ರೆಸ್ಸಿಗೆ ಚುನಾವಣಾ ಆಯೋಗದಲ್ಲಿ ವಿಶ್ವಾಸವಿಲ್ಲ, ಕಾನೂನಿನಲ್ಲಿ ವಿಶ್ವಾಸವಿಲ್ಲ, ಆರ್ ಬಿ ಐ, ಅಂತರರಾಷ್ಟ್ರೀಯ ಸಂಸ್ಥೆಗಳ ಮೇಲೆ ವಿಶ್ವಾಸವಿಲ್ಲ, ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ಯಾವುದರ ಮೇಲೂ ವಿಶ್ವಾಸವಿಲ್ಲ’ ಎಂದಿದ್ದಾರೆ. ‘ಇತ್ತೀಚೆಗೆ ಶಿವಭಕ್ತಿಯ ಕುರಿತು ಚರ್ಚೆ ಜೋರಾಗಿದೆ. ನಿಮಗೆ ಶಿವ 2024 ರಲ್ಲೂ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವ ಶಕ್ತಿಯನ್ನು ನೀಡಲಿ ಎಂದು ನಾನೂ ಪ್ರಾರ್ಥಿಸಿಕೊಳ್ಳುತ್ತೇನೆ’ ಎಂದು ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ‌ ಮೋದಿಯವರು. ರಾಹುಲ್ ರ ಕಣ್ಣುಹೊಡೆದ ವಿಚಾರವನ್ನೂ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಟಿಡಿಪಿ ತಪ್ಪು ಹೆಜ್ಜೆಯಿಟ್ಟಿರುವ ಕುರಿತು ಮಾತನಾಡಿದ ಮೋದಿಯವರು, ಆಂಧ್ರಪ್ರದೇಶದ ಜನತೆಗೆ ತಮ್ಮ ಸೇವೆ ಸದಾ ಮುಂದುವರೆಯಲಿದೆ ಎಂದು ಭರವಸೆಯನ್ನೂ ಇತ್ತರು.

Click to comment

Leave a Reply

Your email address will not be published. Required fields are marked *

Most Popular

To Top