Desi

ಇವರಿಬ್ಬರ ಬದುಕಿನ ಮೇಲೆ ಬೆಳಕು ಚೆಲ್ಲಿದ್ದಕ್ಕೆ, ಹಲವರ ಬದುಕು ಹಸನಾಗಿದ್ದು ಕಾಣಿಸುತ್ತಿದೆ!

-ಶ್ರೀ ನಾಥ್ ಮಾನೆ

ಏಷ್ಯಾ ವಲಯದಲ್ಲಿನ ಸಾಧಕರಿಗೆ ಫಿಲಿಪೈನ್ಸ್ ದೇಶ ನೀಡುವ ಏಷ್ಯಾದ ನೋಬೆಲ್ ಎಂದೇ ಬಿಂಬಿತವಾಗಿರುವ “ಮ್ಯಾಗ್ಸೆಸೆ ಪ್ರಶಸ್ತಿ 2018” ಪ್ರಕಟವಾಗಿದ್ದು, ಆರು ಮಂದಿ ವಿಜೇತರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ. ಸೋನಮ್ ವ್ಯಾಂಗ್​ಚುಕ್ ಹಾಗೂ ಡಾ.ಭರತ್ ವಟ್ವಾನಿ ಪ್ರಶಸ್ತಿ ಪಡೆದ ಭಾರತೀಯರಾಗಿದ್ದಾರೆ. ಇವರಿಬ್ಬರದ್ದೂ ವಿಶೇಷ ಹಾಗೂ ಅಪರೂಪದ ಸಾಧನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವರಿಬ್ಬರ ಬದುಕಿನ ಮೇಲೆ ಬೆಳಕು ಚೆಲ್ಲಿದರೆ ಹಲವರ ಬದುಕು ಹಸನಾಗಿದ್ದು ಕಾಣುತ್ತದೆ.

 

ಸೋನಂ ವಾಂಗ್ ಚುಕ್:-
ಹಿಂದಿ ಚಿತ್ರ ತ್ರೀ ಈಡಿಯಟ್ಸ್ ನಲ್ಲಿ ಅಮಿರ್ ಖಾನ್ ನಿರ್ವಹಿಸಿದ ಪಾತ್ರ “ಫುನ್ ಸುಕ್ ವಾಂಗ್ಡು”ಗೆ ಇವರೇ ಪ್ರೇರಣೆ.

ಹೊಸತನಕ್ಕೆ ಇನ್ನೊಂದು ಹೆಸರೇ ಸೋನಂ ವಾಂಗ್’ಚುಕ್ ಎನ್ನುವಷ್ಟರ ಮಟ್ಟಿಗೆ ಸ್ಥಳೀಯವಾಗಿ ಖ್ಯಾತಿ ಹೊಂದಿರುವ ಇವರು ಭಾರತದ ಲಡಾಕ್ ಮೂಲದ ಎಂಜಿನಿಯರ್. ಕೇವಲ ಗ್ರಾಮೀಣ ಮಟ್ಟದಲ್ಲಿ ಸಣ್ಣ ಬದಲಾವಣೆ ತರುವ ಪ್ರಯತ್ನ ಮಾಡಿದ ವ್ಯಾಂಗ್​ಚುಕ್ ಸದ್ಯ ಜಾಗತಿಕ ಮಟ್ಟದಲ್ಲಿ ಹಲವರಿಗೆ ಮಾದರಿಯಾಗಿರುವುದು ವಿಶೇಷ.

ವಾಂಗ್’ಚುಕ್ “ಈ ಪ್ರಶಸ್ತಿಗೆ ನಾನೊಬ್ಬನೇ ಅರ್ಹನಲ್ಲ. ಇದು ಹೊಸತನ ಬಯಸುವ ಪ್ರತಿ ವಿದ್ಯಾರ್ಥಿಗೂ, ಪ್ರತಿ ಶಿಕ್ಷಕರಿಗೂ, ಪ್ರತಿ ನಾಯಕ ಮತ್ತು ಲಡಾಖಿನ ಪ್ರತಿಯೊಂದು ಕನಸುಗಾರರಿಗೂ ಸೇರಿದೆ” ಎಂದು ಹೇಳಿದ್ದಾರೆ.

ಇವರು ಲಡಾಖಿನ -30° ಸೆಲ್ಸಿಯಸ್ ವಾತಾವರಣದಲ್ಲಿ ಲಭ್ಯವಿರುವ ಸೌರಶಕ್ತಿಯನ್ನೇ ಬಳಸಿಕೊಂಡು ಶಾಲಾ ವಿದ್ಯಾರ್ಥಿಗಳಿಗೆ ಬೆಚ್ಚಗಿನ ಕೊಠಡಿಯನ್ನು ನಿರ್ಮಿಸಿದ್ದು, ಇಲ್ಲಿನ ಕೃಷಿಗೆ ನೀರಿನ ಕೊರತೆಯನ್ನು ನೀಗಿಸಿದ್ಥು, ಎತ್ತರದ ಹಿಮನದಿ ಸರೋವರಗಳಲ್ಲಿ ವಿಪತ್ತು ತಗ್ಗಿಸಲು ನಿರ್ಮಿಸಿದ “ಐಸ್ ಸ್ತೂಪ್” ಭಿನ್ನ ಆಲೋಚನೆಗಳಿಗೆ ಹಿಡಿದ ಕನ್ನಡಿ. “ಐಸ್ ಸ್ತೂಪ” ಯೋಜನೆಯಂತೂ ದೂರದ ಸ್ವಿಟ್ಜರ್ಲೆಂಡ್, ಯುರೋಪ್ ನಿಂದಲೂ ಆಹ್ವಾನ ಬರುವಂತೆ ಮಾಡಿದೆ.

“ಲಡಾಖ್ ನಂತಹ ಸೂಕ್ಷ್ಮ ವಾತಾವರಣದಲ್ಲಿ ಮಾನವ ನಿರ್ಮಿತ ಸವಾಲು ಮತ್ತು ನೈಸರ್ಗಿಕ ಸವಾಲುಗಳು ಹೆಚ್ಚಾಗಿವೆ. ಹಾಗಾಗಿ ಇಲ್ಲಿ ಬದುಕುವುದು ಕೂಡಾ ಸಾಹಸವೇ. ಇಲ್ಲಿನ ಪ್ರತಿಕೂಲತೆಯನ್ನು ಶಪಿಸಿ ವಲಸೆ ಹೋಗುವ ಬದಲು ಇಲ್ಲೇ ಇದ್ದು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿದು ಪ್ರಕೃತಿಯೊಂದಿಗೆ ಸಂತಸವಾಗಿ ಬದುಕಿದರೆ ಇಲ್ಲಿನಷ್ಟು ಸುಖೀ ಜೀವಿಗಳು ಈ ಜಗತ್ತಿನಲ್ಲಿ ಇನ್ನೆಲ್ಲೂ ಇರಲು ಸಾಧ್ಯವಿಲ್ಲ. ನಾನು ಅದನ್ನೇ ಜೀವಿಸಿ ಇತರರಿಗೂ ಹೇಳಿಕೊಟ್ಟೆ ಅಷ್ಟೇ” ಎನ್ನುತ್ತಾ

ಕೇವಲ ಶಾಲಾ ಕಾಲೇಜುಗಳ ಜ್ಞಾನವಷ್ಟೇ ಅಲ್ಲ, ಬದುಕಿಗೆ ಅಗತ್ಯವಿರುವ ಜ್ಞಾನಗಳು ಅದರಿಂದಾಚೆಗೂ ಇವೆ. ಅವುಗಳೆಡೆಗೂ ಕೈ ಚಾಚಿ ಎನ್ನುತ್ತಾ, “ನಾನು ಇಲ್ಲಿ ಯಾವುದನ್ನೂ ಆಯ್ಕೆ ಮಾಡಲಿಲ್ಲ. ಅನಿವಾರ್ಯತೆ ಸಂಶೋಧನೆಯ ತಾಯಿಯಲ್ಲವೇ, ಅದೇ ಮಾಡಿದೆ. ದಾರಿ ಕಂಡು ಕೊಂಡೆ. ಈಗಲೂ ನಾನು ವಿಶೇಷ ಏನೂ ಮಾಡುತ್ತಿಲ್ಲ. ಸಹಜವಾಗಿರುವುದನ್ನೇ ಮಾಡುತ್ತಿದ್ದೇನೆ. ಸಕ್ಸಸ್ ಕಾಣುತ್ತಿದ್ದೇನೆ.
ನನ್ನ ಪ್ರಕಾರ ಲಡಾಖ್ನಲ್ಲಿ ದೆಹಲಿಯ ಉಪಕರಣಗಳನ್ನೇ ನಂಬಿಕೊಂಡು ಕೂತರೆ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಹೇಳುತ್ತಾರೆ,

ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ, “ಚಿಂತನೆಯ ಮೂಲದಲ್ಲಿರುವ ಕೊರತೆ ಬಿಟ್ಟು ಬಿಡಿ. ಹಿಂದೆ ನಮ್ಮನ್ನು ಆಳಿದವರ ವಸಾಹತುಶಾಹಿ ನೀತಿ ಕಾರಣದಿಂದ ಇಂದಿಗೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಲು ಪಶ್ಚಿಮ ಮತ್ತು ಇತರೆಡೆಗೆ ನೋಡುತ್ತಿದ್ದೇವೆ. ಆದರೆ ನೆನಪಿಡಿ, ಇಲ್ಲಿನ ಸವಾಲುಗಳಿಗೆ ಉತ್ತರ ನ್ಯೂಯಾರ್ಕ್ ಅಥವಾ ಲಂಡನ್ ನಿಂದ ಅಗತ್ಯವಿಲ್ಲ. ನಮ್ಮಲ್ಲೇ ಇದೆ. ಢಿಫರೆಂಟಾಗಿ ಯೋಚಿಸಿ ಅಷ್ಟೇ ಆಲ್ ಈಸ್ ವೆಲ್” ಎಂದು ಪ್ರಶಸ್ತಿಯ ವಿಷಯ ಪಕ್ಕಕ್ಕಿಟ್ಟು ತಮ್ಮ ಕಾರ್ಯ ಮುಂದುವರಿಸಿದ್ದಾರೆ.

ಮನೋರೋಗ ಚಿಕಿತ್ಸಕ ಡಾ.ಭರತ್ ವಟ್ವಾನಿ:-

ಬೀದಿಯಲ್ಲಿ ಅನಾಥವಾಗಿ ಸಾಗುವ ಮಾನಸಿಕ ರೋಗಿಗಳನ್ನು ಕರೆ ತಂದು ಉಪಚರಿಸಿ ಚಿಕಿತ್ಸೆ ನೀಡುವ ಮೂಲಕ ಅವರ ಘನತೆಯನ್ನು ಪುನಃ ಸ್ಥಾಪಿಸುತ್ತಿರುವವರೇ ಡಾ.ವಟ್ವಾನಿ. ಇವರು ಮಹಾರಾಷ್ಟ್ರದಲ್ಲಿ ಸ್ಥಾಪಿಸಿರುವ “ಶ್ರದ್ಧಾ ಪುನರ್ವಸತಿ ಕೇಂದ್ರ” ಮಾನಸಿಕ ರೋಗಿಗಳ ಪಾಲಿಗೆ ಒಂದರ್ಥದಲ್ಲಿ ನೆಮ್ಮದಿ ಕೇಂದ್ರವೇ.

ಅವರೇ ಹೇಳುವ ಪ್ರಕಾರ “ಅದೊಮ್ಮೆ ಒಬ್ಬ ಮಾನಸಿಕ ಅಸ್ವಸ್ಥ ತೆಂಗಿನ ಚಿಪ್ಪಿನಿಂದ ಚರಂಡಿಯ ನೀರು ತೆಗೆದು ಕುಡಿಯುತ್ತಿದ್ದ. ಇದನ್ನು ಕಂಡು ಕನಿಕರದಿಂದ ಅವನನ್ನು ಕರೆದೊಯ್ದು ಚಿಕಿತ್ಸೆ ನೀಡಿ ಒಂದು ಹಂತಕ್ಕೆ ಗುಣಪಡಿಸಿದಾಗ ಆತನ ಹಿನ್ನೆಲೆ ಕಂಡು ಸ್ವತಃ ನಾನೇ ದಂಗಾಗಿ ಹೋದೆ. ಅವನು ಬಿ.ಎಸ್ಸಿ ಪದವಿ ಜೊತೆಗೆ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ & ಟೆಕ್ನಾಲಜಿ ಪದವಿ ಪಡೆದಿದ್ದ ವಿದ್ಯಾವಂತ. ಅವನ ತಂದೆ ಆಂದ್ರ ಪ್ರದೇಶದಲ್ಲಿ ಸೂಪರಿಂಟೆಂಡ್ ಅಧಿಕಾರಿ. ಈ ಒಂದು ಘಟನೆ ನನಗೆ ಹಲವು ಮಾನಸಿಕ ರೋಗಿಗಳನ್ನು ಗುಣಪಡಿಸಿ ಅವರ ಕುಟುಂಬಕ್ಕೆ ಸೇರಿಸುವ ಕಾರ್ಯಕ್ಕೆ ಪ್ರೇರಣೆಯಾಯಿತು.

ಚಿಕಿತ್ಸೆ ಫಲಕಾರಿಯಾಗಿ ಎಷ್ಟೋ ದಿನಗಳ ನಂತರ ಅನಿರೀಕ್ಷಿತವಾಗಿ ಇಂತಹವರು ಮನೆಗೆ ಹೋದಾಗ ವೃದ್ಧ ತಂದೆ-ತಾಯಂದರು ಬಿಗಿದಪ್ಪಿ ಅಳುವುದು, ಪುಟ್ಟ ಮಕ್ಕಳು ಅಪ್ಪಿ ಮುದ್ದಾಡುವುದು, ಪತ್ನಿ ಸಂತೋಷದಿಂದ ಪುನಃ ತನ್ನ ಕೊರಳಿಗೆ ಮ್ಯಾಂಗಲ್ಯವನ್ನು ಧರಿಸುವುದು, ಹಣೆಗೆ ಕುಂಕುಮ ಇಟ್ಟುಕೊಂಡು ದೇವರಿಗೆ ಕಣ್ಣೀರ ಮೂಲಕ ಕೃತಜ್ಞತೆ ಸಲ್ಲಿಸುವುದು, ಗೋಡೆಯ ಮೇಲಿರುವ ಫೋಟೋ-ಹೂವಿನ ಹಾರ ತೆಗೆಯುವುದು, ಕೊನೆಗೆ ಕುಟುಂಬವಿಡೀ ಸಂತಸದಿಂದ ತೇಲಾಡುವುದು, ಇದನ್ನೆಲ್ಲ ನೋಡುವಾಗ ಕಣ್ಣಂಚಿನಲ್ಲಿ ನೀರು ಹರಿದು ನಾವು ಪಟ್ಟ ಶ್ರಮ ಸಾರ್ಥಕವೆನಿಸುತ್ತದೆ.

ಇಂತಹ ರೋಗಿಗಳನ್ನು ಮರಳಿ ಕುಟುಂಬಕ್ಕೆ ಸೇರಿಸುವ ಸಂದರ್ಭ ನಮ್ಮ ಪಾಲಿಗೆ ಅತ್ಯಂತ ಭಾವನಾತ್ಮಕವಾಗಿರುತ್ತದೆ. ಹೆಚ್ಚಿನ ಕುಟುಂಬಗಳು ರೋಗಿಗಳನ್ನು ಮನೆಗೆ ಸೇರಿಸಿಕೊಂಡರೆ ಕೆಲವು ಕುಟುಂಬಗಳು ಅಂತಹವರನ್ನು ಸೇರಿಸಿಕೊಳ್ಳದೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವೊಮ್ಮೆ ರೋಗಿಗಳ ಕುಟುಂಬಗಳನ್ನು ಪತ್ತೆಹಚ್ಚಲು ಸಾಧ್ಯವೇ ಆಗುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ, ನಾವು ನಿರಾಶ್ರಿತರಿಗಾಗಿಯೇ ಇರುವ ಅಧಿಕೃತ ಎನ್.ಜಿ.ಓ.ಗಳಿಗೆ ರೋಗಿಗಳನ್ನು ಹಸ್ತಾಂತರಿಸುತ್ತೇವೆ”. ಹೆಚ್ಚಾಗಿ “ಸ್ಕಿಜೋಫ್ರೇನಿಯಾ” ಎಂಬ ಖಾಯಿಲೆಯಿಂದ ಬಳಲುವ ಇಂತಹವರು ಅಲೆದಾಡುವ, ತಮ್ಮಲ್ಲೇ ಮಾತನಾಡುವ, ಕಿರುಚುವ ಮತ್ತು ಹಿಂಸಾತ್ಮಕವಾಗಿ ವರ್ತಿಸುವ ಸ್ವಭಾವ ಹೊಂದಿರುತ್ತಾರೆ. ಇಂತಹವರನ್ನು ಕಂಡರೆ ದಯವಿಟ್ಟು ಹಿಂಸಿಸದೇ ನಮ್ಮನ್ನು ಸಂಪರ್ಕಿಸಿ ಎಂದು ಮನವಿ ಮಾಡುತ್ತಾರೆ ಡಾ.ವಟ್ವಾನಿ.

ಈ ಸಂದರ್ಭದಲ್ಲಿ ತಾವು ಅನುಭವಿಸುವ ಯಾತನೆಯನ್ನು ಹೇಳಲು ಇಚ್ಛಿಸದೇ, “ಬದುಕು ಮುಗಿದೇ ಹೋಯಿತು ಎನ್ನುವವರಿಗೆ ನಮ್ಮ ಕೈಲಾದಷ್ಟು ಸೇವೆ ಮಾಡಿ ಅವರ ಬದುಕಿಗೆ ದಾರಿ ತೋರಿಸಿ ಬಿಡುತ್ತಿದ್ದೇವೆ ಅಷ್ಟೇ” ಎಂದು ಸಿಂಪಲ್ಲಾಗಿ ಮಾತು ಮುಗಿಸುತ್ತಾರೆ ವಟ್ವಾನಿಯವರು.

ಸುಮಾರು 30 ಜನರ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಇವರು ಇದುವರೆಗೆ ಮರಳಿ ಗೂಡಿಗೆ ಸೇರಿಸಿರುವ ಮಾನಸಿಕ ರೋಗಿಗಳ ಸಂಖ್ಯೆ 10,000 ಕ್ಕೂ ಹೆಚ್ಚು!

ಇಂದಿನ ಕಾಲದಲ್ಲಿ ಹೊಸತನ ಕಾಣೆಯಾಗಿದೆ, ಮಾನವೀಯತೆ ಇಲ್ಲವಾಗಿದೆ ಎಂಬುವವರ ಮಧ್ಯೆ ಇವರಿಬ್ಬರ ಬದುಕು ನಮಗೆಲ್ಲಾ ಪ್ರೇರಣಾದಾಯಿಯಾಗಿ ಕಾಣುತ್ತದೆ. ಇಂತಹ ಅಪರೂಪದ ಬದುಕು ಬಾಳುತ್ತಿರುವ ಇವರಿಗೆ ಇದೇ ಆಗಸ್ಟ್​​ 31ರಂದು ಫಿಲಿಪೈನ್ಸ್ ನಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ…

Click to comment

Leave a Reply

Your email address will not be published. Required fields are marked *

Most Popular

To Top