Desi

ಆ ದರೋಡೆ ಇತಿಹಾಸವನ್ನೇ ಸೃಷ್ಟಿಸಿತು!

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮುಗಿದು ಆರೇಳು ದಶಕಗಳು ಕಳೆದು ಹೋಗಿದ್ದವು. ಅತ್ಯಂತ ಕ್ರೂರ ರೀತಿಯಲ್ಲಿ ಸ್ವಾತಂತ್ರ್ಯದ ಇಚ್ಛೆಯನ್ನು ಹತ್ತಿಕ್ಕುತ್ತಿದ್ದ ಬ್ರಿಟೀಷರಿಗೆ ತಮ್ಮ ಬುಡದಲ್ಲೇ ಉತ್ಕಾಂತ್ರಿಯ ಜ್ವಾಲಾಮುಖಿಯೊಂದು ಸುಡುತ್ತಲಿದೆ ಎಂಬುದು ಅರಿವೇ ಇರಲಿಲ್ಲ. ದೇಶದುದ್ದಗಲಕ್ಕೂ ಬ್ರಿಟೀಷರ ವಿರುದ್ಧದ ಆಕ್ರೋಶ ಹೊಗೆಯಾಡುತ್ತಲೇ ಇತ್ತು. ಎಲ್ಲರನ್ನೂ ಒಟ್ಟುಗೂಡಿಸಿ ಈ ಹೊಗೆಯನ್ನು ಧಗಧಗಿಸುವ ಜ್ವಾಲೆಯಾಗಿ ಪರಿವತರ್ಿಸುವ ಸಮರ್ಥ ನಾಯಕತ್ವ ಬೇಕಿತ್ತು ಅಷ್ಟೇ. ರಾಮ್ ಪ್ರಸಾದ್ ಬಿಸ್ಮಿಲ್ ಆಗ ಕಂಡು ಬಂದ ಶ್ರೇಷ್ಠ ನಾಯಕರಲ್ಲೊಬ್ಬ. ತನ್ನೊಂದಿಗೆ ಚಂದ್ರಶೇಖರ್ ಆಜಾದ್, ಅಶ್ಫಾಖುಲ್ಲಾಖಾನ್, ರೋಶನ್ ಸಿಂಗ್, ರಾಜೇಂದ್ರ ಲಾಹರಿ, ಕುಂದನ್ ಲಾಲ್, ಮುಕುಂದಿ ಲಾಲ್, ಮನ್ಮಥನಾಥ ಗುಪ್ತ ಮತ್ತು ಆನಂತರದ ದಿನಗಳಲ್ಲಿ ಭಗತ್ಸಿಂಗ್ರಂತಹ ತರುಣರನ್ನೂ ಕೂಡ ತನ್ನ ಗುಂಪಿಗೆ ಸೇರಿಸಿಕೊಂಡು ತನ್ನದೇ ಆದ ರೀತಿಯಲ್ಲಿ ಬ್ರಿಟೀಷರ ವಿರುದ್ಧ ಕಾದಾಡುತ್ತಿದ್ದ. ಬಿಸ್ಮಿಲ್ ಬರೆದ ಕವಿತೆಗಳು ಹಸಿದ ಹೊಟ್ಟೆಯಲ್ಲೂ ಬಂದೂಕು ಹಿಡಿದು ಬ್ರಿಟೀಷರ ವಿರುದ್ಧ ಕಾದಾಡುವ ಪ್ರೇರಣೆ ತುಂಬಿಬಿಡುತ್ತಿದ್ದವು!

 

ಬೆಳ್ಳಿ ಕಿರಣ  

1925 ರ ಆಸುಪಾಸು. ಬ್ರಿಟೀಷರ ವಿರುದ್ಧ ತೀವ್ರಗತಿಯ ಕದನ ನಡೆಸಬೇಕೆಂದು ಕ್ರಾಂತಿಕಾರಿಗಳೆಲ್ಲ ನಿಶ್ಚಯಿಸಿಯಾಗಿತ್ತು. ಆದರೆ ಶಸ್ತ್ರಧಾರಿಯಾಗಿದ್ದ ಆಂಗ್ಲ ಪೊಲೀಸರ ವಿರುದ್ಧ ಲಾಠಿಯಿಂದಂತೂ ಹೊಡೆದಾಡಲು ಸಾಧ್ಯವಿರಲಿಲ್ಲ. ಅದಕ್ಕೆ ಸಮರ್ಥವಾಗಿರುವ ಆಯುಧಗಳೇ ಬೇಕಿದ್ದವು. ಜರ್ಮನಿಯಿಂದ ಈ ಬಗೆಯ ಒಂದು ಆಯುಧ ಸಂಗ್ರಹವು ಭಾರತದೆಡೆಗೆ ಹೊರಟಿತ್ತು. ಅದನ್ನು ತರಿಸುತ್ತಿರುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಬಿಸ್ಮಿಲ್ ಅವರಿಗೆ ದುಡ್ಡು ಕೊಡುವುದು ಹೇಗೆ ಎಂದು ಚಿಂತಿಸಲಾರಂಭಿಸಿದ. ಜೊತೆಯಲ್ಲಿದ್ದ ಮಿತ್ರರೆಲ್ಲಾ ಎಂದಿನಂತೆ ಸ್ಥಳೀಯ ಸಿರಿವಂತರನ್ನು ಲೂಟಿ ಮಾಡುವ ಉಪಾಯ ಕೊಟ್ಟರು. ಯಾಕೋ ಬಿಸ್ಮಿಲ್ಲನ ಮನಸ್ಸು ಕೇಳಲಿಲ್ಲ. ತಮ್ಮವರನ್ನೇ ಸುಲಿದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದರಲ್ಲಿ ಆತನಿಗೆ ಯಾವ ಪುರುಷಾರ್ಥವೂ ಕಾಣಲಿಲ್ಲ. ಹಾಗಂತ ಸುಮ್ಮನಿರುವಂತೆಯೂ ಇಲ್ಲ. ಈ ಬಾರಿ ಶಸ್ತ್ರಾಸ್ತ್ರಗಳನ್ನು ಪಡೆದು ಹೋರಾಟಕ್ಕೆ ಧುಮುಕದಿದ್ದರೆ ಮುಂದೆಂದೂ ಇಂತಹ ಹೋರಾಟ ಸಂಘಟಿಸುವುದು ಕಷ್ಟವೆಂಬುದು ಆತನಿಗೆ ಗೊತ್ತಿತ್ತು. ಅದೇ ಗುಂಗಿನಲ್ಲಿ ಆತ ‘ಏಯ್ಟ್ಡೌನ್’ ಎಂಬ ರೈಲು ಹತ್ತಿದ್ದ. ಅದೇ ರೈಲಿನಲ್ಲಿ ಬ್ರಿಟೀಷರು ತಾವು ವಸೂಲಿ ಮಾಡಿದ ಕಂದಾಯದ ಹಣವನ್ನು ಸಾಗಿಸುತ್ತಾರೆಂಬುದು ಆತನ ಗಮನಕ್ಕೆ ಬಂದಿತು. ಷಹಜಹಾನ್ ಪುರದಿಂದ ಲಕ್ನೊವರೆಗೆ ರೈಲು ಹೋಗುವವರೆಗೆ ಹೆಚ್ಚೂ ಕಡಿಮೆ ಹತ್ತು ಸಾವಿರ ರೂಪಾಯಿವರೆಗೆ ಹಣ ಸಂಗ್ರಹವಾಗುವುದಾಗಿ ಬಿಸ್ಮಿಲ್ ಅಂದಾಜು ಮಾಡಿದರು. ಮತ್ತಿನ್ನೇನೂ, ಅವರ ತಲೆಯೊಳಗೆ ಯೋಜನೆ ರೂಪುಗೊಂಡಿತು. ಎಲ್ಲೆಡೆ ಹಂಚಿಹೋಗಿದ್ದ ಕ್ರಾಂತಿಕಾರಿಗಳನ್ನೆಲ್ಲಾ ಒಂದೆಡೆ ಕರೆದು ಸಭೆ ನಡೆಸಿದರು ಬಿಸ್ಮಿಲ್. ವಿಚಾರ ಕೇಳಿ ಕ್ರಾಂತಿಕಾರಿಗಳೆಲ್ಲಾ ಕುಣಿದಾಡಿದರು.

ಇಷ್ಟು ದಿನ ನಮ್ಮವರನ್ನೇ ಸುಲಿದದ್ದಾಯ್ತು. ಈಗ ನಮ್ಮವರಿಂದ ಕಸಿದು ಬ್ರಿಟೀಷರು ಹೊತ್ತೊಯ್ಯುತ್ತಿದ್ದ ಹಣವನ್ನು ನಾವು ಕಿತ್ತು ತರಬೇಕಾಗಿದೆ ಎಂಬ ವಿಚಾರವೇ ಅವರೆಲ್ಲರನ್ನೂ ರೋಮಾಂಚಿತರನ್ನಾಗಿಸಿತ್ತು. ತಡ ಮಾಡುವ ಪ್ರಶ್ನೆಯೇ ಇರಲಿಲ್ಲ. ಆಗಸ್ಟ್ 8 ಕ್ಕೆ ಮುಹೂರ್ತ ನಿಶ್ಚಯವೂ ಆಯ್ತು. ಇಡಿಯ ಸಭೆಯಲ್ಲಿ ಶಾಂತವಾಗಿ ಕುಳಿತಿದ್ದ ಅಶ್ಫಾಖುಲ್ಲಾಖಾನ್ ನಡುವೆ ಬಾಯಿ ಹಾಕಿದ. ತಾವು ಮಾಡುವ ಈ ಲೂಟಿಯಿಂದ ಬ್ರಿಟೀಷ್ ಸಕರ್ಾರಕ್ಕೆ ಸವಾಲೊಡ್ಡಿದಂತಾಗುತ್ತದೆ. ಸಮರ್ಥ ಕ್ರಾಂತಿಕಾರಿಗಳ ತಂಡವೊಂದು ಲಕ್ನೊನಲ್ಲಿ ಬೀಡು ಬಿಟ್ಟಿದೆ ಎಂಬುದು ಅವರ ಅರಿವಿಗೆ ಬಂದುಬಿಡುತ್ತದೆ. ಆನಂತರ ಮುಗಿಬಿದ್ದು ನಮ್ಮನ್ನೆಲ್ಲಾ ಬಂಧಿಸಲು ಶುರುಮಾಡಿಬಿಡುತ್ತಾರೆ. ಇದು ಮುಂದೆ ನಡೆಯಬೇಕಾಗಿರುವ ಮಹತ್ಕಾರ್ಯಕ್ಕೆ ದೊಡ್ಡ ಹೊಡೆತವಾಗಲಿದೆ ಎಂದು ಎಚ್ಚರಿಸಿದ. ಬಿಸ್ಮಿಲ್ಲನಿಗಿರಲಿ ಸಭೆಯಲ್ಲಿದ್ದ ಯಾರಿಗೂ ಅಶ್ಫಾಕನ ಈ ಮಾತುಗಳು ಹಿಡಿಸಲಿಲ್ಲ. ‘ಸವಾಲು ಸ್ವೀಕರಿಸಿಯೇ ಈ ಮಾರ್ಗವನ್ನು ಅಪ್ಪಿಕೊಂಡವರು ನಾವು. ಇನ್ನಷ್ಟು ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯುವುದಿಲ್ಲ’ ಎಂಬುದೇ ಎಲ್ಲರ ಒಕ್ಕೊರಲ ದನಿಯಾಗಿತ್ತು.

ಆ ಕರಾಳ ರಾತ್ರಿ

ಆಗಸ್ಟ್ 8 ರಂದು ಬೇರೆ ಬೇರೆ ದಿಕ್ಕಿನಿಂದ ಕ್ರಾಂತಿಕಾರಿಗಳೆಲ್ಲಾ ರೈಲು ನಿಲ್ದಾಣ ತಲುಪುವ ವೇಳೆಗಾಗಲೇ ಏಯ್ಟ್ಡೌನ್ ರೈಲು ಹೊರಟಾಗಿತ್ತು. ಕೈ-ಕೈ ಹಿಸುಕಿಕೊಂಡ ಕ್ರಾಂತಿಕಾರಿಗಳು ಯೋಜನೆಯನ್ನು ಕೈ ಬಿಡಲು ಸಿದ್ಧರಿರಲಿಲ್ಲ. ಇಡಿಯ ಕಲ್ಪನೆಗೆ ಹೊಸ ರೂಪ ಕೊಟ್ಟರು. ಈ ರೈಲನ್ನು ಲಕ್ನೊದಲ್ಲಿಯೇ ಹತ್ತಿ ಕಾಕೋರಿ ದಾಟುತ್ತಿದ್ದಂತೆ ಚೈನೆಳೆದು ರೈಲು ನಿಲ್ಲಿಸಿ ಹಣ ತುಂಬಿದ ಸಂದೂಕನ್ನು ಹೊತ್ತೊಯ್ಯುವುದೆಂದು ನಿರ್ಧರಿಸಲಾಯ್ತು. ಅಂದು ಆಗಸ್ಟ್ ಒಂಭತ್ತು. ಅಶ್ಫಾಕ್, ಲಾಹಿರಿ ಮತ್ತು ಶಚೀಂದ್ರ ಬಕ್ಷಿ ಎರಡನೆ ದಜರ್ೆಯ ಟಿಕೆಟು ಪಡೆದು ರೈಲು ಹತ್ತಿಕೊಂಡರು. ನಾಯಕ ಬಿಸ್ಮಿಲ್ಲನೂ ಸೇರಿದಂತೆ ಉಳಿದವರೆಲ್ಲಾ ಜನರಲ್ ಬೋಗಿಯ ಪ್ರಯಾಣಿಕರಾದರು. ರೈಲು ಕಾಕೋರಿಯನ್ನು ದಾಟುತ್ತಿದ್ದಂತೆ ಶಚೀಂದ್ರ ಬಕ್ಷಿ ತನ್ನ ಒಡವೆಗಳ ಪಟ್ಟಿ ಇರುವ ಚೀಲ ನಿಲ್ದಾಣದಲ್ಲಿಯೇ ಉಳಿದುಹೋಯ್ತು ಎಂದು ಬೊಬ್ಬಿಡಲಾರಂಭಿಸಿದ. ರಾಜೇಂದ್ರ ಲಾಹರಿಯೂ ಅದಕ್ಕೆ ದನಿಗೂಡಿಸಿದ. ರೈಲು ಕಾಕೋರಿಯಿಂದ ಬಹಳ ದೂರವೇನೂ ಹೋಗಿರಲಿಲ್ಲ. ತಕ್ಷಣವೇ ಶಚೀಂದ್ರ ಚೈನೆಳೆದು ರೈಲು ನಿಲ್ಲಿಸಿದ. ಸುತ್ತಲೂ ಕಾರ್ಗತ್ತಲು. ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುವಂತೆಯೇ ಇರಲಿಲ್ಲ. ಸಾಮಾನ್ಯ ಬೋಗಿಯಲ್ಲಿದ್ದ ಕ್ರಾಂತಿಕಾರಿಗಳೆಲ್ಲಾ ಕೆಳಗಿಳಿದು ಒಂದೆರಡು ಸುತ್ತು ಗುಂಡು ಹಾರಿಸಿ ಎಲ್ಲ ಪ್ರಯಾಣಿಕರೂ ಶಾಂತವಾಗಿರುವಂತೆ ನೋಡಿಕೊಂಡರು.

ಬಿಸ್ಮಿಲ್ಲರ ಸೂಚನೆ ದೊರೆಯುತ್ತಿದ್ದಂತೆ ಶಚೀಂದ್ರ ರೈಲ್ವೇ ಗಾರ್ಡನ್ನು ಬಡಿದು ಕಂದಾಯದ ಹಣ ತುಂಬಿದ್ದ ಕಬ್ಬಿಣದ ಸಂದೂಕನ್ನು ಹೊರಗೆಳೆದುಕೊಂಡರು. ಒಂದಿಬ್ಬರು ಕ್ರಾಂತಿಕಾರಿಗಳು ಸುತ್ತಿಗೆಯಿಂದ ಸಂದೂಕಿಗೆ ಬಲವಾದ ಏಟು ಕೊಡಲಾರಂಭಿಸಿದರು. ರೈಲಿನ ಅಕ್ಕ-ಪಕ್ಕವೇ ಸುತ್ತಾಡುತ್ತಿದ್ದ ಉಳಿದ ಕ್ರಾಂತಿಕಾರಿಗಳು ಜನಸಾಮಾನ್ಯರಿಗೆ ತಾವು ತೊಂದರೆ ಕೊಡಲು ಬಂದಿಲ್ಲವೆಂದು. ಕ್ರಾಂತಿಕಾರ್ಯಕ್ಕೆ ಬೇಕಾಗಿದ್ದ ಹಣ ಹೊಂದಿಸಲು ಸಂದೂಕನ್ನೊಯ್ಯಲು ಬಂದಿದ್ದೇವೆ ಎಂಬುದನ್ನು ಕೂಗಿ ಹೇಳುತ್ತಾ ಜನರನ್ನು ಸಮಾಧಾನ ಪಡಿಸುತ್ತಿದ್ದರು. ಅಷ್ಟರ ವೇಳೆಗೆ ಎದುರಿನಿಂದ ಸಿಳ್ಳು ಹಾಕುತ್ತ ಧಾವಿಸಿ ಬಂದ ಮತ್ತೊಂದು ರೈಲು ಇವರೆಲ್ಲರನ್ನೂ ಆತಂಕಕ್ಕೆ ದೂಡಿಬಿಟ್ಟಿತ್ತು. ಆ ರೈಲು ನಿಂತರೆ ಅದರಲ್ಲಿರುವ ಪೊಲೀಸರೊಂದಿಗೆ ಗುಂಡಿನ ಚಕಮಕಿ, ಮತ್ತಿಷ್ಟು ಗಲಾಟೆ. ಹಣವೂ ಹೋಯ್ತು, ಜೀವಕ್ಕೆ ಅಪಾಯವೂ ಹೌದು. ಬಿಸ್ಮಿಲ್ಲನೂ ಸೇರಿದಂತೆ ಪ್ರತಿಯಬ್ಬ ಕ್ರಾಂತಿಕಾರಿಯ ತಲೆಯಲ್ಲೂ ಇದೇ ಚಿಂತನೆಗಳು ಗಿರಕಿ ಹೊಡೆಯುತ್ತಿದ್ದವು. ಆದರೆ ಬೆಟ್ಟವಾಗಿ ಬಂದ ಸಮಸ್ಯೆ ಮಂಜಾಗಿ ಕರಗಿಹೋಯ್ತು. ಸದ್ದು ಮಾಡುತ್ತಾ ಬಂದ ರೈಲು ಅಷ್ಟೇ ವೇಗವಾಗಿ ಹೊರಟು ಹೊಯ್ತು.

 

ಇತ್ತ ಸಂದೂಕು ತೆರದುಕೊಳ್ಳದೇ ಹೋದಾಗ ಅಶ್ಫಾಕ್ ಸುತ್ತಿಗೆಯನ್ನು ತನ್ನ ಕೈಗೆತ್ತಿಕೊಂಡ. ಬಲವಾಗಿಯೇ ಸಂದೂಕಿಗೆ ಬಡಿಯಲಾರಂಭಿಸಿದ. ಯಾವುದೋ ಒಂದು ಹಂತದಲ್ಲಿ ಸಂದೂಕಿಗೊಂದು ರಂಧ್ರವಾಯ್ತು. ಅದರಲ್ಲಿದ್ದ ಹಣವನ್ನೆಲ್ಲಾ ತಮ್ಮ ಥೈಲಿಗೆ ತುಂಬಿಕೊಂಡು ಕ್ರಾಂತಿಕಾರಿಗಳೆಲ್ಲಾ ಕತ್ತಲಲ್ಲಿ ಮಾಯವಾಗಿಬಿಟ್ಟರು. ಬೆಳಗಿನ ಜಾವ ಎಲ್ಲ ಪತ್ರಿಕೆಗಳಲ್ಲೂ ಕಾಕೋರಿ ದರೋಡೆಯದ್ದೇ ಸುದ್ದಿ. ತಮ್ಮನ್ನು ತಾವು ಬಲು ಸಾಹಸಿ ಪಡೆ ಎಂದು ಬೀಗುತ್ತಿದ್ದ, ಅತ್ಯಂತ ಶ್ರೇಷ್ಠ ಗೂಢಚಾರ ವ್ಯವಸ್ಥೆ ತಮ್ಮದೆಂದು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದ ಆಂಗ್ಲರಿಗೆ ಕಾಕೋರಿಯ ಈ ಪ್ರಕರಣ ನುಂಗಲಾರದ ತುತ್ತಾಗಿಬಿಟ್ಟಿತ್ತು! ಎಲ್ಲಕ್ಕೂ ಅಚ್ಚರಿಯೇನು ಗೊತ್ತೇ? ಇದೇ ಬಂಡಿಯಲ್ಲಿದ್ದ ಸಕರ್ಾರಿ ಅಧಿಕಾರಿಗಳು, ಸಿಪಾಯಿಗಳು ತಾವು ಕುಳಿತಲ್ಲಿಂದ ಸ್ವಲ್ಪವೂ ಮಿಸುಕಾಡಿರಲಿಲ್ಲ. ರೈಲಿನೊಳಗೆ ಇದ್ದ ಆಂಗ್ಲ ಮೇಜರ್ ಹೊರಗೂ ಬರದೇ ಅಡಗಿ ಕುಳಿತಿದ್ದದ್ದು ಬ್ರಿಟೀಷರೆದೆಯಲ್ಲಿ ಕ್ರಾಂತಿಕಾರಿಗಳ ಕುರಿತಂತೆ ಇದ್ದ ಭಯವನ್ನು ಎತ್ತಿ ತೋರಿಸುವಂತಿತ್ತು.
ಆಳರಸರು ಇದನ್ನು ಬಲುದೊಡ್ಡ ಸವಾಲಾಗಿಯೇ ಸ್ವೀಕರಿಸಿದರು. ಭಾರತದಲ್ಲೊಂತು ಅವರ ಮಾನ ಹರಾಜಾಗಿತ್ತು. ದೂರದ ಇಂಗ್ಲೆಂಡಿನಲ್ಲೂ ಅವರ ಕುರಿತಂತೆ ಆಡಿಕೊಳ್ಳುವಂತಾಗಿತ್ತು. ಸಕರ್ಾರಿ ಖಜಾನೆಗೆ ಕಣ್ಣು ಹಾಕಿರುವ ಈ ತಂಡ ಬರಲಿರುವ ದಿನಗಳಲ್ಲಿ ಇಡಿಯ ದೇಶದಲ್ಲಿ ಉತ್ಪಾತವುಂಟುಮಾಡಬಹುದೆಂದು ಅವರಿಗೆ ಅರಿವಿತ್ತು.

ದಮನ ಚಕ್ರ

ಕ್ರಾಂತಿಕಾರಿಗಳ್ಯಾರೂ ಲಕ್ನೊ ಷಹಜಹಾನ್ಪುರ್ ಬಿಟ್ಟು ಹೊರಗೆ ಹೋಗಿಲ್ಲ ಎಂಬುದು ಪೊಲೀಸರ ಅರಿವಿಗೆ ಬರಲು ಬಹಳ ಕಾಲ ಬೇಕಾಗಲಿಲ್ಲ. ಕದ್ದ ಹಣದ ಕೆಲವು ನೋಟುಗಳು ಷಹಜಹಾನ್ಪುರದಲ್ಲಿ ಚಲಾವಣೆಗೆ ಬಂದಿದ್ದು ಅವರ ಅನುಮಾನವನ್ನು ದೃಢಪಡಿಸಿತ್ತು. ಗೂಢಚಾರರ ಪ್ರಯತ್ನಕ್ಕೆ ಒಬ್ಬೊಬ್ಬರಾಗಿ ಕ್ರಾಂತಿಕಾರಿಗಳು ಸಿಕ್ಕಿಬಿದ್ದರು. ಒಟ್ಟಾರೆ ಕಾಕೋರಿ ಕಾಂಡದ ನಂತರ 40 ಕ್ರಾಂತಿಕಾರಿಗಳು ಬ್ರಿಟೀಷರ ಕೈವಶವಾದರು. ಸ್ನೇಹಿತರು ನೀಡಿದ ಎಚ್ಚರಿಕೆಯನ್ನು ರಾಮ್ಪ್ರಸಾದ್ ಬಿಸ್ಮಿಲ್ ಅಂದುಕೊಂಡದ್ದಕ್ಕಿಂತ ಸುಲಭವಾಗಿಯೇ ಬ್ರಿಟೀಷರ ಕೈಪಾಲಾಗಿಬಿಟ್ಟ. ತನ್ನ ಕುರಿತು ಬ್ರಿಟೀಷರಿಗೆ ಯಾವ ಸಾಕ್ಷಿಯೂ ಸಿಗಲಾರದೆಂಬ ಆತನ ಅತಿ ವಿಶ್ವಸಾವೇ ಮುಳುವಾಯ್ತು. ಬೆಳಗಿನ ಜಾವದ ವೇಳೆಗೆ ಮನೆಯಲ್ಲೇ ಮಲಗಿದ್ದ ಬಿಸ್ಮಿಲ್ಲನನ್ನು ಪೊಲೀಸರು ಅನಾಯಾಸವಾಗಿ ಬಂಧಿಸಿ ಒಯ್ದರು. ಅಶ್ಫಾಕ್ ಲಾಹಿರಿಯಾದಿಯಾಗಿ ಹೆಚ್ಚು-ಕಡಿಮೆ ಎಲ್ಲರೂ ಕೈವಶವಾದರು. ಕಣ್ತಪ್ಪಿಸಿ ಉಳಿದವನು ಚಂದ್ರಶೇಖರ್ ಆಜಾದ್ ಮಾತ್ರ!

ಮುಂದೆ ಬಿಸ್ಮಿಲ್ ಅಶ್ಫಾಕಾದಿಯಾಗಿ ಅನೇಕರಿಗೆ ನೇಣು ಶಿಕ್ಷೆ ಘೋಷಿಸಿತು ಸಕರ್ಾರ. ಒಂದಿನಿತೂ ತಲೆಕೆಡಿಸಿಕೊಳ್ಳದ ಬಿಸ್ಮಿಲ್ ಕೊನೆಯ ಆಸೆ ಏನೆಂದು ಕೇಳಿದಾಗ ನ್ಯಾಯಾಲಯದ ಹೊರಗಿನ ಹುಲ್ಲು ಹಾಸಿನ ಮೇಲೆ ಸ್ವತಂತ್ರವಾಗಿ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕೆಂಬ ಬಯಕೆ ವ್ಯಕ್ತಪಡಿಸಿದ. ಕ್ರಾಂತಿಕಾರಿಗಳಷ್ಟೂ ಜನ ನ್ಯಾಯಾಲಯದ ಅನುಮತಿ ಪಡೆದೇ ಹುಲ್ಲುಹಾಸಿನ ಮೇಲೆ ಕುಳಿತು ಬಿಸ್ಮಿಲ್ಲನೇ ಬರೆದ ಗೀತೆಯನ್ನು ಹಾಡಿಕೊಂಡರು, ‘ಸರ್ಫರೋಷಿ ಕಿ ತಮ್ಮನ್ನಾ ಅಬ್ ಹಮಾರೇ ದಿಲ್ ಮೇ ಹೇ. ದೇಖ್ ನಾ ಹೇ ಜೋರ್ ಕಿತನಾ ಬಾಜೂಏ ಕಾತಿಲ್ ಮೆ ಹೈ’ ಸಾಯುವ ಹುಚ್ಚು ಹೃದಯವನ್ನು ಆವರಿಸಿಕೊಂಡಿದೆ, ಕೊಲ್ಲುವವನ ರಟ್ಟೆಯಲ್ಲಿನ ತಾಕತ್ತನ್ನು ನಾವೀಗ ಪರೀಕ್ಷಿಸಬೇಕಿದೆ ಎಂಬರ್ಥದ ಗೀತೆ ನೇಣಿಗೇರುವ ಮುನ್ನವೂ ಆ ಮಿತ್ರರಲ್ಲಿ ವಿದ್ಯುತ್ ಸಂಚಾರವನ್ನೇ ಉಂಟು ಮಾಡಿತ್ತು. ಮುಂದೆ ಆಜಾದ್ ತಾನು ಭಗತ್, ರಾಜಗುರು, ಸುಖದೇವ್ ಭಟುಕೇಶ್ವರರೇ ಮೊದಲಾದ ತರುಣರ ತಂಡವನ್ನು ರೂಪಿಸಿ ಅದರ ನೇತೃತ್ವ ವಹಿಸಿದ. ಒಬ್ಬನ ಬಲಿದಾನ ಸಾವಿರಾರು ಜನರ ನಿಮರ್ಾಣಕ್ಕೆ ಕಾರಣವಾಗುವುದು ಎಂದರೆ ಹೀಗೆಯೇ.

ಅಂದಹಾಗೆ, ಭಾರತೀಯ ಇತಿಹಾಸ ಮರೆಯಬಾರದ ಆ ಕಾಕೋರಿ ದರೋಡೆ ನಡೆದು 93 ವರ್ಷಗಳು ಕಳೆದೇ ಹೋಯ್ತು. ಆ ಪ್ರಕರಣದೊಂದಿಗೆ ಈ ದೇಶದ ಮಹಾನ್ ಕ್ರಾಂತಿಕಾರಿಗಳ ಬದುಕು ತಳುಕು ಹಾಕಿಕೊಂಡಿರುವುದರಿಂದ ಒಮ್ಮೆ ನೆನಪಿಸಿಕೊಳ್ಳಬೇಕಾಯ್ತು ಅಷ್ಟೇ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top