National

ಆಜಾದರಿಂದ ಸ್ಪೂರ್ತಿ ಪಡೆದ ಕ್ರಾಂತಿ ‘ಸೂರ್ಯ’!

1930 ರ ಹೊತ್ತಿನಲ್ಲಿ ಭಾರತದ ಎಲ್ಲಾ ಕ್ರಾಂತಿಕಾರಿಗಳಿಗೂ ಚಂದ್ರಶೇಖರ ಅಜಾದನ ಹಿರಿಮೆ, ಸಂಘಟನಾ ಕೌಶಲ್ಯ, ಆತನ ವ್ಯಕ್ತಿತ್ವ ಮತ್ತು ದೇಶಕ್ಕಾಗಿ ಸಮರ್ಪಿತ ಜೀವನದ ಬಗ್ಗೆ ಗೌರವ ಭಾವನೆ ಮೂಡಿತ್ತು. ಆಜಾದರಿಂದ ಸ್ಫೂರ್ತಿ ಪಡೆದುಕೊಂಡು ಕ್ರಾಂತಿಕಾರಿಯಾಗಿ ಬ್ರಿಟೀಷರ ವಿರುದ್ಧ ಸೆಟೆದು ನಿಂತವರಲ್ಲಿ ಮುಂಚೂಣಿಯಲ್ಲಿ ಬರುವ ಹೆಸರೇ ಬಂಗಾಳದ ‘ಮಾಸ್ತರ್ ದಾ’; ಸೂರ್‍ಯಸೇನ್.
ಸೂರ್ಯಸೇನ್ 22 ಮಾರ್ಚ್ 1894 ರಲ್ಲಿ ಚಿತ್ತಗಾಂಗ್ ನಲ್ಲಿ ಜನಿಸಿದರು. 1916 ರಲ್ಲಿ ಬಿ.ಎ. ಪದವಿ ಪಡೆದು ತಮ್ಮ ಉಪನ್ಯಾಸಕರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ. ತಮ್ಮ ವಿದ್ಯಾಭ್ಯಾಸದ ನಂತರ 1918 ರಲ್ಲಿ  ಚಿತ್ತಗಾಂಗಿನ ನಂದಂಕನಾನ್ ನಲ್ಲಿ ಗಣಿತದ ಶಿಕ್ಷಕರಾಗಿ ಕೆಲಸಕ್ಕೆ ಸೇರುತ್ತಾರೆ. ಕ್ರಾಂತಿಕಾರಿ ಆದರ್ಶಗಳ ಕಡೆ ಆಕರ್ಷಿತರಾದ ಅವರು ಬಂಗಾಳದ ಕ್ರಾಂತಿಕಾರಿ ಸಮಿತಿಯಾದ ‘ಅನುಶೀಲನ ಸಮಿತಿ’ ಗೆ ಸೇರುತ್ತಾರೆ. ಅವರಿಗೆ ಗುಮಾಸ್ತರನ್ನು ತಯಾರಿಸುವ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ. ವಿದ್ಯಾರ್ಥಿಗಳಲ್ಲಿ ದೇಶ, ಸಮಾಜ ಹಾಗೂ ರಾಜಕೀಯ ಪರಿಸ್ಥಿತಿಯ ಬಗ್ಗೆ ಜಾಗೃತಿಯನ್ನು ಮಾಡಿಸುವುದೇ ಶಿಕ್ಷಕನ ಕೆಲಸ ಎಂದೇ ಅವರ ಬಲವಾದ ನಂಬಿಕೆ. ಅದರಂತೆ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಶಿಕ್ಷಣ ನೀಡುವುದರ ಜೊತೆಗೆ ದೇಶಭಕ್ತಿ ವಿಚಾರಗಳನ್ನೂ ಅವರಲ್ಲಿ ಬಿತ್ತಲಾರಂಭಿಸುತ್ತಾರೆ. ದಿನವೂ ಯುವಕರೊಂದಿಗೆ ಸಂಪರ್ಕ, ಹೊಸ ಯುವಕರ ಭೇಟಿ ಮಾಡುತ್ತಾ ಸ್ವಾತಂತ್ರ್ಯ ಮತ್ತು ಕ್ರಾಂತಿಯ ಮಹತ್ವವನ್ನು ಬೋಧಿಸುತ್ತಾ ತಮ್ಮದೇ ಆದ ಕ್ರಾಂತಿ ಪಡೆಯನ್ನು ಕಟ್ಟುತ್ತಾರೆ. ಬಂಗಾಲದಲ್ಲಿ ಕಮ್ಯುನಿಸಂ ಪ್ರಭಾವವಿತ್ತಾದರೂ ಈ ನೆಲಕ್ಕೆ ಆ ವಿಚಾರಧಾರೆ ಹೊಂದುವುದಿಲ್ಲ ಎಂದು ಸ್ವಾಮಿ ವಿವೇಕಾನಂದ ಮತ್ತು ಅರವಿಂದರ ರಾಷ್ಟ್ರೀಯ ವಿಚಾರಧಾರೆಯಿಂದ ಪ್ರೇರಿತರಾಗಿದ್ದರು.
ಚಿತ್ತಗಾಂಗಿನ ಬೆಟ್ಟಗುಡ್ಡ ಪ್ರದೇಶದಲ್ಲಿ ಸೂರ್ಯಸೇನರ ಸಂಗಾತಿಗಳು ಸೇರಿ ತಮ್ಮ ಭವಿಷ್ಯದ ಕ್ರಾಂತಿಕಾರ್ಯದ ರೂಪುರೇಷೆಯನ್ನು ಚರ್ಚಿಸುತ್ತಿದ್ದರು. ಇದೇ ಸಮಯದಲ್ಲಿ ಉತ್ತಮ ತರುಣರನ್ನು ಆರಿಸಿ ತರಬೇತು ಕೊಡುತ್ತಿದ್ದರು. ಆಗಲೇ ಗಣೇಶ್ ಘೋಷ್, ಅನಂತ ಸಿಂಗ್ ಮತ್ತು ಕಲ್ಕತ್ತಾದ ದೇವೇನ್ ಡೇ ಬಂದು ಮಾಸ್ತರರನ್ನು ಸೇರಿಕೊಳ್ಳುತ್ತಾರೆ. ದೇವೇನ್ ದರೋಡೆ ನಿಭಾಯಿಸುವುದರಲ್ಲಿ ನಿಪುಣ. ಇವರ ಆಗಮನದಿಂದಾಗಿ ಮಾಸ್ತರರಿಗೆ ಹೆಚ್ಚು ಬಲ ಬಂದಂತಾಗುತ್ತದೆ. ಇವರ ಕ್ರಾಂತಿಯ ಚಟುವಟಿಕೆ ನಡೆಯುತ್ತಿದ್ದರೂ ಅದರ ಸುಳಿವು ಮಾತ್ರ ಸ್ವಲ್ಪವೂ ಸಿಗುತ್ತಿರಲಿಲ್ಲ. ಎಲ್ಲಾ ಕ್ರಾಂತಿಕಾರಿ ಸಂಘಟನೆಗಳಿಗೆ ಎದುರಾಗುವಂತೆ ಹಣದ ಸಮಸ್ಯೆ ಇವರಿಗೂ ಎದುರಾಗುತ್ತದೆ.
ಒಮ್ಮೆ ರೈಲ್ವೇ ಇಲಾಖೆಯ ವಾಹನ ಚಿತ್ತಗಾಂಗಿನಲ್ಲಿ ತಿಂಗಳ ಸಂಬಳ ತೆಗೆದುಕೊಂಡು ಹೋಗುತ್ತಿತ್ತು. ನಾಲ್ವರು ಯುವಕರು ಆ ಗಾಡಿಗೆ ಅಡ್ಡ ಹಾಕಿ ಪಿಸ್ತೂಲು ತೋರಿಸಿ ಚಾಲಕನನ್ನು ಇಳಿಸುತ್ತಾರೆ. ನಂತರ ಒಬ್ಬ ಗಾಡಿಯನ್ನು ಓಡಿಸಿಕೊಂಡು, ಹಣದ ಪೆಟ್ಟಿಗೆಯನ್ನು ದರೋಡೆ ಮಾಡಿಕೊಂಡು ಅಲ್ಲಿಂದ ನಾಪತ್ತೆಯಾಗುತ್ತಾರೆ. ಈ ಕೆಲಸ ಮಾಡಿದವರು ದೇವೇನ್ ಡೇ ಮತ್ತು ಅನಂತ್ ಸಿಂಗ್. ಈ ಕಾರ್ಯಾಚರಣೆಯಲ್ಲಿ ಕ್ರಾಂತಿಕಾರಿಗಳಿಗೆ 17000 ರೂಪಾಯಿ ಸಿಗುತ್ತದೆ. ಈ ಘಟನೆಯಿಂದಾಗಿ ಚಿತ್ತಗಾಂಗಿನಲ್ಲೊಂದು ಕ್ರಾಂತಿಕಾರಿಗಳ ದಳ ಅಸ್ತಿತ್ವದಲ್ಲಿದೆ ಎಂದು ಸರ್ಕಾರಕ್ಕೆ ಅನುಮಾನ ಹುಟ್ಟಿಕೊಳ್ಳುತ್ತದೆ. ಹುಡುಕಾಟ ನಡೆಸಿದರೂ ಮಾಸ್ತರ್ ಅಥವಾ ಅವರ ಸಂಗಾತಿಗಳಾರೂ ಸಿಕ್ಕಿ ಬೀಳುವುದಿಲ್ಲ. ಅಪಾರ ಆತ್ಮೀಯರ ಬಳಗ ಹೊಂದಿದ ಮಾಸ್ತರ ಜಾಡನ್ನು ಹಿಡಿಯಲು ಪೋಲೀಸರಿಗೆ ಸಾಧ್ಯವಾಗುವುದಿಲ್ಲ. ಮಾಸ್ತರ್ ಪೋಲಿಸರಿಗೆ ಸಿಕ್ಕಿ ಬೀಳದಿದ್ದಕ್ಕೆ ಕಾರಣ ಅವರು ಹೆಚ್ಚು ಕಾಲ ಚಿಕ್ಕಚಿಕ್ಕ ಹಳ್ಳಿಗಳಲ್ಲಿ ಇರುತ್ತಿದ್ದದ್ದು. ಆಜಾದರಿಗಿದ್ದಂತೆ ಸಾಮಾನ್ಯರು ಮತ್ತು ಹಳ್ಳಿಗಳು ಮಾಸ್ತರರಿಗೆ ರಕ್ಷಣಾ ಕೋಟೆಯಾಗಿತ್ತು.
ಪೋಲಿಸರು ಗುಮಾನಿಯಿಂದ ಮಾಸ್ತರರಿದ್ದ ಹಳ್ಳಿಗೂ ಪ್ರವೇಶಿಸುತ್ತಾರೆ. ಇದನ್ನು ಗಮನಿಸಿದ ಡೇವೇನ್ ಡೇ ಎಲ್ಲರನ್ನು ಎಚ್ಚರಿಸುತ್ತಾನೆ. ಮರುಕ್ಷಣದಲ್ಲೇ ಕ್ರಾಂತಿಕಾರಿ ಗೆಳೆಯರು ಜೋಪಾನವಾಗಿ ಬಾಂಬು, ಪಿಸ್ತೂಲು ರಿವಾಲ್ವರ್ ಮುಂತಾದ ವಸ್ತುಗಳನ್ನು ಕೊಂಡೊಯ್ದು ಗುಡ್ಡಗಾಡಿನಲ್ಲಿ ಮಾಯವಾಗುತ್ತಾರೆ. ಪೋಲಿಸರಿಗೆ ಇದರ ಸುಳಿವು ಸಿಕ್ಕಿ ಹಿಂಬಾಲಿಸುತ್ತಾರೆ. ಮಾಸ್ತರ್ ಮತ್ತು ಗೆಳೆಯರು ದರೋಡೆಕೋರರ ಗುಂಪು ಎಂದು ಹಳ್ಳಿಗರಿಗೆ ಹೇಳಿ ಅವರನ್ನು ತಮ್ಮ ಜೊತೆ ಸೇರಿಸಿಕೊಂಡು ‘ಕಳ್ಳರು, ಕಳ್ಳರು! ‘ ಎಂದು ಹಿಡಿಯಲು ಪ್ರಯತ್ನಿಸುತ್ತಾರೆ. ಇದು ಪೋಲಿಸರ ಆಟ ಎಂದು ತಿಳಿದು, ಹಳ್ಳಿಗರ ಬಳಿ ತಮ್ಮ ಹತ್ತಿರವಿದ್ದ 2000 ರೂಪಾಯಿ ಹಣವನ್ನು ಎಸೆದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಿಟ್ಟೂ ಬಿಡದೆ ಹಿಂಬಾಲಿಸಿದ ಹಳ್ಳಿಗರಿಂದ ತಪ್ಪಿಸಿಕೊಂಡು ಬೆಟ್ಟದ ಒಂದು ಭಾಗಕ್ಕೆ ಹೋಗಿ ಬಂಡೆಗಳ ಹಿಂದೆ ಅಡಗಿಕೊಂಡು ಗುಂಡು ಹಾರಿಸಲು ಪ್ರಾರಂಭಿಸುತ್ತಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಳ್ಳುತ್ತಾರೆ. ಆದರೂ ಮಾಸ್ತರರ ಚಾಕಚಕ್ಯತೆಯಿಂದ ಎಲ್ಲರೂ ತಪ್ಪಿಸಿಕೊಳ್ಳುತ್ತಾರೆ.
ಕ್ರಾಂತಿಕಾರಿಗಳು ಕೆಲವರು ಅಹಿಂಸಾತ್ಮಕವಾಗಿ ಕಾಂಗ್ರೇಸಿನ ಚಟುವಟಿಕೆಗಲ್ಲಿ ಒಲವು ತೋರಿಸಿದ್ದರು. ಮಾಸ್ತರರು ಹಿಂಸಾತ್ಮಕ ಮಾರ್ಗದಲ್ಲೇ ಸ್ವಾತಂತ್ರ್ಯ ಬರಬೇಕೆಂಬ ವಾದ ಮಾಡುತ್ತಿರಲಿಲ್ಲ. ಯಾವುದಾದರು ಸರಿ ಸ್ವಾತಂತ್ಯ್ರ ದೊರಕಬೇಕು ಎಂಬುದು ಅವರ ಆಶಯವಾಗಿತ್ತು. ಈ ದಿಕ್ಕಿನಲ್ಲಿ ಮಾಸ್ತರರು ಕಾಂಗ್ರೇಸಿನ ಅಧಿವೇಶನದಲ್ಲೂ ಭಾಗವಹಿಸಿದ್ದರು. ಆದರೆ, ಕಾಂಗ್ರೇಸಿನ ಒಳಹೊಕ್ಕಂತೆಲ್ಲ ಅದರ ಕಾರ್ಯವಿಧಾನದಲ್ಲಿ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತೊಮ್ಮೆ ಕ್ರಾಂತಿಕಾರ್ಯಕ್ಕೆ ಧುಮುಕುತ್ತಾರೆ. ಹಳೆಯ ಗೆಳೆಯರನ್ನು ಸೇರಿಸಿಕೊಂಡು ತನ್ನ ಎಲ್ಲಾ ಚಟುವಟಿಕೆಗಳಿಗೂ ಚಿತ್ತಗಾಂಗ್ ಕೇಂದ್ರ ಮಾಡಿಕೊಂಡು ಯುವಕರನ್ನು ಸಂಘಟಿಸಬೇಕು ಎಂದು ನಿರ್ಧಾರ ಮಾಡುತ್ತಾರೆ.
ತಮ್ಮ ಸಂಘಟನೆ ಸೇನೆಯ ರೀತಿಯಲ್ಲಿ ಶಿಸ್ತು ಬದ್ಧವಾಗಿರಬೇಕು. ಅಜಾದರ ರೀತಿಯಲ್ಲಿ ‘ಇಂಡಿಯನ್ ರಿಪಬ್ಲಿಕನ್ ಆರ್ಮಿ’ ಎಂಬ ಹೆಸರಿನಲ್ಲಿ ಸೇನೆ ಸ್ಥಾಪಿಸುವುದು ಅವರ ಯೋಜನೆಯಾಯಿತು. ತನ್ನನ್ನು ಕ್ರಾಂತಿಕಾರಿ ಎನ್ನುವ ಬದಲು ಸೈನಿಕ ಎಂದು ಕರೆದುಕೊಳ್ಳಲಾರಂಭಿಸಿದರು. ಸೈನಿಕ ಸಂಘಟನೆ, ಗೆರಿಲ್ಲ ಯುದ್ದ ತಂತ್ರ ಮುಂತಾದ ವಿಷಯದ ಬಗ್ಗೆ ಅಧ್ಯಯನ ನಡೆಸುತ್ತಾರೆ. ದರೋಡೆಯ ಬದಲು ಹಣಕ್ಕಾಗಿ ಜನರಿಂದ ಚಂದ ರೂಪದಲ್ಲಿ ಹಣ ಸಂಗ್ರಹಣೆ ಮಾಡುತ್ತಾರೆ. ಹೀಗೆ ಸುಮಾರು 40000 ರೂಪಾಯಿ ಅಷ್ಟು ಸಂಗ್ರಹವಾಗುತ್ತದೆ.  ಸೈನಿಕ ತರಬೇತಿಯನ್ನು ಆರಂಭಿಸಿ ತನ್ನ ಸಹಕಾರಿಗಳಿಗೆ ಸುತ್ತಮುತ್ತಲಿನ ಪರಿಸರವನ್ನು ಅಭ್ಯಸಿಸಲು ಹೇಳುತ್ತಾರೆ. ಅಲ್ಲಿನ ಬೆಟ್ಟಗುಡ್ಡಗಳು, ರಹಸ್ಯ ಸ್ಥಳಗಳು, ಆಯಾಕಟ್ಟಿನ ಸ್ಥಳ, ವನ ಪ್ರದೇಶ ಇವೆಲ್ಲವನ್ನೂ ಚಿರಪರಿಚಿತ ಮಾಡಿಕೊಳ್ಳಲು ಸೂಚಿಸುತ್ತಾರೆ. ಸರ್ಕಾರದ ಯಾವ ಯಾವ ಇಲಾಖೆ ಎಲ್ಲಿಲ್ಲಿವೆ, ಸೈನಿಕ ಶಕ್ತಿ, ಬ್ರಿಟೀಷರ ಕ್ಲಬ್ಬುಗಳು, ಟೆಲಿಗ್ರಾಫ಼್ ಮತ್ತು ರೈಲುಗಳ ವ್ಯವಸ್ಥೆ, ಅದರ ಓಡಾಟದ ಸಮಯಗಳ ಮಾಹಿತಿಯನ್ನೂ ಸಂಗ್ರಹಿಸುತ್ತಾರೆ.
ಮಾಸ್ತರರ ಕಾರ್ಯ ವಿಧಾನ ವಿಶಿಷ್ಟವಾಗಿತ್ತು. ಅವರ ಮನಸ್ಸಿನಲ್ಲಿದ್ದ ಯೋಜನೆಗಳನ್ನು ತನ್ನ ಸಹಕಾರಿಗಳಿಗೆ ತಿಳಿಸುತ್ತಿರಲಿಲ್ಲ. ಸಮಯಕ್ಕೆ ಸೂಚನೆಕೊಟ್ಟು ಕೆಲಸ ಮಾಡಿಸುತ್ತಿದ್ದರು. ತಮ್ಮ ಸಂಘಟನೆಯ ಬಲ ಅರಿತುಕೊಂಡ ಮಾಸ್ತರರು ಆಂಗ್ಲರಿಗೆ ಸೆಡ್ಡು ಹೊಡೆಯುವಂತಹ ಐತಿಹಾಸಿಕ ಕಾರ್ಯಕ್ಕೆ ಮುಂದಾದರು. ಅದೇ ಚಿತ್ತಗಾಂಗ್ ಶಸ್ತ್ರಾಗಾರದ ದರೋಡೆ! ಎಪ್ರಿಲ್ 18ರ ರಾತ್ರಿ ಎಲ್ಲರೂ ಹೊರಟರು. ಆ ತಂಡದಲ್ಲಿ ದೇವಪ್ರಸಾದ್, ಅನಂದ ಪ್ರಸಾದ್ ಗುಪ್ತ ಸಹೋದರರು, ಗಣೇಶ್ ಘೋಷ್, ಅನಂತ ಸಿಂಗ್, ಲೋಕನಾಥ್ ಬಲ್ ಮತ್ತಿತರರು ಇದ್ದರು. ಇವರಿಗೆಲ್ಲ ನಾಯಕರಾಗಿ ಮಾಸ್ತರ್ ಸೂರ್‍ಯಸೇನ್ ಇದ್ದರು. ಗಣೇಶ್ ಮತ್ತು ಅನಂತ ಸಿಂಗ್ ಒಂದು ಟ್ಯಾಕ್ಸಿಯಲ್ಲಿ ಹೊರಟು ಮಧ್ಯದಲ್ಲಿ ಚಾಲಕನಿಗೆ ಪಿಸ್ತೂಲು ತೋರಿಸಿ, ಹೆದರಿಸಿ ಒಂದು ಮನೆಯಲ್ಲಿ ಕೈ ಕಾಲು ಕಟ್ಟಿಹಾಕುತ್ತಾರೆ. ನಂತರ ಅದೇ ಟ್ಯಾಕ್ಸಿಯನ್ನು ತೆಗೆದುಕೊಂಡು ಮಾಯವಾದರು. ಮತ್ತೊಂದು ಕಡೆ ಲೋಕನಾಥರ ತಂಡ ಮತ್ತೊಂದು ಟ್ಯಾಕ್ಸಿಯಲ್ಲಿ ಹೊರಟು ಆ ಚಾಲಕನನ್ನು ಕ್ಲೋರೋಫ಼ಾರ್ಮ್ ಬಳಸಿ ಎಚ್ಚರ ತಪ್ಪಿಸಿ, ರಸ್ತೆಯಲ್ಲಿ ಇಳಿಸಿ ಟ್ಯಾಕ್ಸಿಯನ್ನು ತೆಗೆದುಕೊಂಡು ಹೊರಡುತ್ತಾರೆ. ತುಸು ಹೊತ್ತಿನಲ್ಲೆ ಎಲ್ಲರೂ ಗುಡ್ಡದ ಮೇಲಿದ್ದ ಶಸ್ತ್ರಾಗಾರದ ಬಳಿ ಬಂದು ಸೇರುತ್ತಾರೆ. ಕೆಲ ಹೊತ್ತಿನಲ್ಲೇ ಮಾಸ್ತರರು ತಮ್ಮ ಗಾಡಿಯಲ್ಲಿ ಅಲ್ಲಿಗೆ ಬಂದು ಸೇರುತ್ತಾರೆ.
ಎಲ್ಲರೂ ಸೈನಿಕ ಸಮವಸ್ತ್ರ ಧರಿಸಿದ್ದರು. ಸೊಂಟದಲ್ಲಿ ಪಿಸ್ತುಗಳಿದ್ದವು. ಶಸ್ತ್ರಾಗಾರದ ಬಳಿಯಿದ್ದ ನಾಲ್ಕು ಪೋಲೀಸ್ ಕಾವಲುಗಾರರು ಇವರನ್ನು ನೋಡಿ ಯಾರೋ ಮೇಲಧಿಕಾರಿ ಎಂದುಕೊಳ್ಳುತ್ತಾರೆ. ಮುಂದೆ ಹೋಗುತ್ತಿದ್ದಂತೆ ಪಿಸ್ತೂಲು ತೆಗೆದು ಕಾವಲುಗಾರರ ಮೇಲೆ ಗುಂಡು ಹಾರಿಸುತ್ತಾ ‘ಫ಼ೈರ್’ ಎಂದು ಆದೇಶಿಸುತ್ತಾರೆ. ಒಬ್ಬ ಕಾವಲುಗಾರ ಬಿದ್ದಮೇಲೆ ಇತರರ ಮೇಲೆ ಬಾಂಬನ್ನು ಎಸೆಯಲಾಗುತ್ತದೆ. ಹೊರಾಟದ ಮಧ್ಯದಲ್ಲಿ ಮಾಸ್ತರರು ಮತ್ತು ಜೊತೆಯಲಿದ್ದ 30 ಕ್ರಾಂತಿಯೋಧರು ಶಸ್ತ್ರಾಗಾರ ಪ್ರವೇಶಿಸುತ್ತಾರೆ. ಅಲ್ಲಿದ್ದ ಪೆಟ್ಟಿಗೆಗಳನ್ನು ಒಡೆದು ಯಥೇಚ್ಛ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಾರೆ. ಇದೇ ರೀತಿ ಲೋಕನಾಥ್ ತಂಡ ಆಕ್ಸಿಲರಿ ಮಿಲಿಟರಿ ಶಸ್ತ್ರಾಗಾರದ ಬಳಿ ಆಕ್ರಮಣ ಮಾಡುತ್ತಾರೆ. ಅಲ್ಲಿನ ಅಧಿಕಾರಿಯನ್ನು ಕೊಂದು ಅಲ್ಲಿಗೆ ಕಾರಿನಲ್ಲಿ ಬಂದ ಮೂವರು ಆಂಗ್ಲರ ಮೇಲೆ ಗುಂಡಿನ ಸುರಿಮಳೆಗೆರೆಯುತ್ತಾರೆ. ಕ್ರಾಂತಿಯೋಧರನ್ನು ಕಂಡು ಕಾರನ್ನು ಅಲ್ಲಿಯೇ ಬಿಟ್ಟು ಓಡುತ್ತಾರೆ ಆಂಗ್ಲರು. ಶಸ್ತ್ರಾಗಾರದ ಬಾಗಿಲನ್ನು ಓಡೆಯುವ ಮುನ್ನ ಮತ್ತೊಂದು ದಿಕ್ಕಿನಲ್ಲಿ ದಾಳಿಯಾಗುತ್ತದೆ. ಬೇರೆ ದಾರಿ ಇಲ್ಲದೆ ಶಸ್ತ್ರಾಗಾರಕ್ಕೆ ಕ್ರಾಂತಿಯೋಧರು ಬೆಂಕಿ ಹಚ್ಚುತ್ತಾರೆ. ಕೈಗೆ ಸಿಕ್ಕ ಕೆಲವು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾರೆ. ಮತ್ತೊಂದು ತಂಡ ಟೆಲಿಫ಼ೋನ್ ಎಕ್ಸ್ ಛೇಂಜ್ ಮೆಲೆ ದಾಳಿ ಮಾಡಿ ಕೆಲಸ ಮುಗಿಸಿ ಮರಳುತ್ತಾರೆ. ಸೈನಿಕ ರೀತಿಯಲ್ಲಿ ತಮ್ಮ ನಾಯಕ ಮಾಸ್ತರ್ ಸೂರ್ಯಸೇನರಿಗೆ ವಂದನೆ ಸಲ್ಲಿಸುತ್ತಾರೆ.
ಆಕ್ರಮಣದ ಸುದ್ಧಿ ಕೇಳಿ ಆಂಗ್ಲರು ತತ್ತರಿಸಿ ಹೋಗುತ್ತಾರೆ. ತಮ್ಮ ಮಡದಿ ಮಕ್ಕಳೊಡನೆ ಮನೆಗಳನ್ನು ತೊರೆದು ನದಿದಡಕ್ಕೆ ಧಾವಿಸುತ್ತಾರೆ. ಅಷ್ಟರಲ್ಲಿ ಲೂಯಿಸ್ ಗನ್ ಎಂಬಲ್ಲಿ ಗುಂಡಿನ ಹಾರಾಟ ಕೇಳಿಸುತ್ತದೆ. ಗಾಯಾಳುಗಳನ್ನು ಗುಪ್ತ ಸ್ಥಳಗಳಿಗೆ ತಲುಪಿಸಲು ಹೋಗಿದ್ದ ತಂಡ ಹಿಂತಿರುಗಿರಲಿಲ್ಲ. ಮಾಸ್ತರರ ಚಿಂತೆ ಹೆಚ್ಚಾಗುತ್ತದೆ. ಗುಡ್ಡಗಳಲ್ಲಿ ತಲೆಮರೆಸಿಕೊಂಡು ಬೆಳಗಾದ ಮೇಲೆ ಯೋಚಿಸುವುದು ಸರಿ ಎಂದು ತೀರ್ಮಾನಿಸುತ್ತಾರೆ. ನಂತರ ಗುಡ್ಡಗಾಡುಗಳಲಿ ಎಲ್ಲರೂ ತಪ್ಪಿಸಿಕೊಳ್ಳುತ್ತಾರೆ.
ಈ ಘಟನೆ ಆಂಗ್ಲರಿಗೆ ಸಿಡಿಲು ಬಡಿದಂತಾಗುತ್ತದೆ. ಕ್ರಾಂತಿಕಾರಿಗಳನ್ನು ಬಂಧಿಸಲು ಸಹಾಯ ಮಾಡುವವರಿಗೆ 5000 ರೂಪಾಯಿ ಕೊಡುವುದಾಗಿ ಘೋಷಿಸುತ್ತಾರೆ. ಎಲ್ಲಾ ಕಡೆ ಈ ಸುದ್ಧಿ ಕಳಿಸಿ ವಿಮಾನದಲ್ಲಿ ಸೈನಿಕರನ್ನು ಕರೆಸಿಕೊಳ್ಳುತ್ತಾರೆ. ಇದನ್ನು ಗಮನಿಸಿದ ಮಾಸ್ತರ್ ಕ್ರಾಂತಿಕಾರರನ್ನು ಒಂದೆಡೆ ಸೈನಿಕ ರೀತಿಯಲ್ಲಿ ನಿಲ್ಲಿಸುತ್ತಾರೆ. ಅವರಿಗೆಲ್ಲ ಪರಿಸ್ಥಿತಿಯನ್ನು ವಿವರಿಸಿ ಅಂತಿಮ ಹೋರಾಟಕ್ಕೆ ಎಲ್ಲರನ್ನು ಅಣಿಮಾಡುತ್ತಾರೆ. ಶತ್ರು ಸೈನ್ಯ ತಮಗಿಂತಲೂ ಅನೇಕ ಪಟ್ಟು ಉತ್ತಮವಾದರೂ ಚಿಂತಿಸದೆ ತಮ್ಮ ಶೌರ್ಯ, ಸಾಹಸ, ದೇಶಭಕ್ತಿಯನ್ನು ಪ್ರದರ್ಶಿಸುವ ಸಮಯ ಬಂದಿದೆ ಎಂದು ಸೇನಾನಾಯಕನಂತೆ ಅವರಲ್ಲಿ ಉತ್ಸಾಹ ತುಂಬುತ್ತಾರೆ.
ಸಂಜೆ 4:30ರ ಹೊತ್ತು, ಅವರ ಬಳಿ ಕೆಲವು ಮೆಷಿನ್ಗನ್ಗಳು ಇದ್ದವು. ಅವುಗಳನ್ನು ಬಳಸಿಕೊಂಡು ಲೋಕನಾಥರ ತಂಡ ಹೋರಾಟ ಮಾಡಬೇಕು ಎಂದು ಆದೇಶಿಸಿದರು. ಒಂದು ಕಡೆ ಶತ್ರಸಜ್ಜಿತ ಆಂಗ್ಲ ಸೈನ್ಯ ಮಾತ್ತೊಂದು ಕಡೆ 1-2 ದಿನಗಳಿಂದ ಊಟವಿಲ್ಲದ, ಕೇವಲ ಮನೋಬಲದ ಮೇಲೆ ಜೀವಿಸಿದ್ದ ಕ್ರಾಂತಿಯೋಧರು! ಆಂಗ್ಲರ ತೋಪುಗಳು ಬೆಂಕಿ ಉಗುಳಲು ಶುರುಮಾಡಿದವು. ಮೊದಲ ಸುತ್ತಿನಲ್ಲೇ 11 ಜನ ಅಸುನೀಗಿದರು. ಒಬ್ಬೊಬ್ಬರೂ ‘ವಂದೇ ಮಾತರಂ’ ಎಂದು ಘೊಷಿಸುತ್ತಾ ಭಾರತ ಮಾತೆಗೆ ಬಲಿದಾನ ನೀಡಿದರು. ಕೆಲವರು ಗಾಯಗೊಂಡು ಪರಾರಿಯಾದರು. ಆಂಗ್ಲರ ಕೈಗೆ 1933 ರಲ್ಲಿ ಮಾಸ್ತರ್ ಸೂರ್ಯಸೇನರು ಆಂಗ್ಲರಿಗೆ ಸಿಕ್ಕಿ ಬೀಳುತ್ತಾರೆ. ಅವರಿಗೆ ಮರಣದಂಡನೆ ವಿಧಿಸಲಾಗುತ್ತದೆ. 1934 ಜನವರಿ 14 ರಂದು ಮಾಸ್ತರ್ ಸೂರ್‍ಯಸೇನರನ್ನು ಗಲ್ಲಿಗೇರಿಸುತ್ತಾರೆ! ಇತಿಹಾಸಸಲ್ಲಿ ಕ್ರಾಂತಿಯ ‘ಸೂರ್ಯ’ ಅಮರರಾಗುತ್ತಾರೆ!
-ಕಾರ್ತಿಕ್ ಕಶ್ಯಪ್

Click to comment

Leave a Reply

Your email address will not be published. Required fields are marked *

Most Popular

To Top