Vishwaguru

ಆಕ್ರಮಕರ ಕೀರ್ತಿ ಮುಕ್ಕಾಗಿಸಿದ ಬುಕ್ಕರಾಯ!

-ಕಿರಣ್ ಹೆಗ್ಗದ್ದೆ

ವಿದೇಶೀ ಆಕ್ರಮಣಕಾರಿಗಳ ದುರಾಡಳಿತವೆಂಬ ಕಗ್ಗತ್ತಲೆಯಲ್ಲಿದ್ದ ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ರೂಪದಲ್ಲಿ ಸ್ವಾತಂತ್ರ್ಯದ ಹಣತೆಯೊಂದು ಬೆಳಗಲಾರಂಭಿಸಿತ್ತು. ಅದಕ್ಕೆ ಋಷಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಮೊದಲು ತೈಲ ಹೊಯ್ದವನು ಹರಿಹರರಾಯ. ಆ ಹಣತೆಯಾರದಂತೆ ಜಾಗೃತಿ ವಹಿಸಬೇಕಾದ ಹೊಣೆಗಾರಿಕೆಯೀಗ ಅವನ ಸೋದರ ಬುಕ್ಕರಾಯನ ಮೇಲೆ ಬಿತ್ತು.

ಹೊಯ್ಸಳ ಸಾಮ್ರಾಜ್ಯದಲ್ಲಿ ಸೇನಾಧಿಕಾರಿಯಾಗಿದ್ದಾಗಲೀ ಹರಿಹರನೊಂದಿಗೆ ಹಲವಾರು ಸೈನಿಕ ಕಾರ್ಯಾಚರಣೆಗಳಲ್ಲಿ, ರಾಜನೈತಿಕ ಕಾರ್ಯಗಳಲ್ಲಿ ಭಾಗವಹಿಸಿದ್ದ ಬುಕ್ಕರಾಯನಿಗೆ ವಿಜಯನಗರ ಸಾಮ್ರಾಜ್ಯದ ಜವಾಬ್ದಾರಿ ಹೊರುವ ಗುಣವು ಸಹಜವಾಗಿಯೇ ಬಂದಿತ್ತು. 1346 ರಲ್ಲಿ ವಿಜಯನಗರ ಸಾಮ್ರಾಜ್ಯದ ಯುವರಾಜನಾದ ಬುಕ್ಕರಾಯನು ಅಣ್ಣ ಹರಿಹರನಿಗೆ ಸಂಪೂರ್ಣ ಸಹಕಾರ ನೀಡತೊಡಗಿದ. 1354 ರಲ್ಲಿ ಹರಿಹರನು ನಿಧನ ಹೊಂದಿದಾಗ ಸಾಮ್ರಾಜ್ಯದ ಪ್ರಭುವಾಗಿ ಬುಕ್ಕರಾಯ ಪಟ್ಟಾಭಿಷಿಕ್ತನಾದ.

ಸಿಂಹಕ್ಕೆ ‘ಸ್ವಯಂಮೇವ ಮೃಗೇಂದ್ರತಾ’ ಎಂಬ ಒಂದು ವಿಶೇಷ ಸ್ವಭಾವವಿದೆ. ಸಿಂಹಕ್ಕೆ ದೈನ್ಯತೆ ಗೊತ್ತಿಲ್ಲ. ಪರರ ಹಂಗು ಅದಕ್ಕರಿವಿಲ್ಲ. ಭಯ ಅದರ ಹತ್ತಿರಕ್ಕೂ ಸುಳಿಯದ ಗುಣ. ಈ ಗುಣವಿಶೇಷಣಗಳೇ ಅದಕ್ಕೆ ವನರಾಜನೆಂಬ ಪಟ್ಟ ತಂದುಕೊಟ್ಟಿದೆ. ವನರಾಜನಾಗಲು ಅದು ಯಾರ ಹಂಗನ್ನೂ ಹಾರೈಸುವುದಿಲ್ಲ.

ಬುಕ್ಕರಾಯನಿಗೆ ಈ ಸಿಂಹಸದೃಶ ಗುಣವು ಹುಟ್ಟಿನಿಂದಲೇ ಬಂದಿತ್ತು. ಆತನಿಗೆ ಸಣ್ಣ-ಪುಟ್ಟ ವಿಷಯಗಳಲ್ಲಿ ಆಸಕ್ತಿಯಿರಲಿಲ್ಲ. ದಕ್ಷಿಣ ಭಾರತದ ಮೇಲೆ ಮಿಡತೆಗಳಂತೆ ಹಿಂಡು-ಹಿಂಡಾಗಿ ದಾಳಿಯಿಟ್ಟು ಇಲ್ಲಿನ ನಮ್ಮ ಶ್ರದ್ಧಾಕೇಂದ್ರಗಳಾದ ದೇವಸ್ಥಾನ-ಮಠ-ಮಂದಿರಗಳನ್ನು ಧ್ವಂಸಗೊಳಿಸಿ ಕೊನೆಗೆ ತಮ್ಮ ಪ್ರತಿನಿಧಿಗಳಲ್ಲೊಬ್ಬನನ್ನು ಸುಲ್ತಾನನನ್ನೋ, ಸುಬೇದಾರನನ್ನೋ ಮಾಡಿ ದಿಲ್ಲಿಗೆ ತೆರಳುತ್ತಿದ್ದ ಮೊಗಲರ ವಿರುದ್ಧ ತೊಡೆತಟ್ಟಿ ನಿಲ್ಲುವೆನೆಂದು ಬುಕ್ಕರಾಯ ಬಾಲ್ಯದಲ್ಲಿಯೇ ನಿರ್ಧರಿಸಿಯಾಗಿತ್ತು. ಆ ನಿರ್ಧಾರಕ್ಕೆ ನೀರೆರೆದು ಪೋಷಿಸಿದವರು ಗುರು ವಿದ್ಯಾರಣ್ಯರು.

ಈ ವೀರ ಸಂಕಲ್ಪದ ಆರಂಭದ ಹೆಜ್ಜೆಯೆಂಬಂತೆ ಬುಕ್ಕನ ದೃಷ್ಟಿ ಆದಿಲ್ ಷಾಹಿಗಳ ವಶದಲ್ಲಿದ್ದ ವಾರಂಗಲ್ಲಿನ ಮೇಲೆ ಬಿತ್ತು. ವಾರಂಗಲ್ಲಿನ ಆಕ್ರಮಿತ ಪ್ರದೇಶವನ್ನು ವಿಜಯನಗರ ಸಾಮ್ರಾಜ್ಯಕ್ಕೆ ಬಿಟ್ಟುಕೊಡಬೇಕೆಂಬ ಒಕ್ಕಣೆಯುಳ್ಳ ಪತ್ರವು ಬುಕ್ಕರಾಯರಿಂದ ಕಲ್ಬುರ್ಗಿಯ ಮಹಮ್ಮದ್ ಷಹನಿಗೆ ಹೋಯ್ತು. ಹಿಂದೂ ರಾಜರುಗಳಿಂದ ಅಂದಿನ ದಿನಗಳಲ್ಲಿ ಈ ರೀತಿಯ ಸವಾಲುಗಳನ್ನೇ ಎದುರಿಸದಿದ್ದ ಮಹಮ್ಮದ್ ಷಹ ಎಚ್ಚರಗೊಂಡ. ವಿಜಯನಗರಕ್ಕೊಂದು ಶಾಂತಿ ನಿಯೋಗವನ್ನು ಕಳಿಸಿದ ಮಹಮದ್ ಷಹ ಅದೇ ಸಮಯದಲ್ಲಿ ವಾರಂಗಲ್ಲಿನ ಮೇಲೆಯೇ ದಂಡೆತ್ತಿ ಹೋದ. ವಾರಂಗಲ್ಲಿನ ರಾಜ ವಿನಾಯಕ ದೇವನನ್ನು ಬಂಧಿಸಿ ಅವನನ್ನು ಜೀವಂತ ಬೆಂಕಿಗೆ ಹಾಕಿ ಸುಡಿಸಿಬಿಟ್ಟ ಮಹ್ಮದ್ ಷಾ.

ಅವನ ಈ ರಾಕ್ಷಸೀ ಕೆಲಸಕ್ಕೆ ಉರಿದುಬಿದ್ದ ವಾರಂಗಲ್ಲಿನ ಜನತೆ ತಾವೇ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಮಹಮದ್ ಷಾಹ್ ನ ಸೈನ್ಯದ ಮೇಲೆ ನುಗ್ಗಿ ಬಂತು. ಅದೇ ಸಂದರ್ಭದಲ್ಲಿ ಬುಕ್ಕರಾಯನ ಸೈನ್ಯವೂ ವಾರಂಗಲ್ಲಿನ ಬಳಿ ಬೀಡುಬಿಟ್ಟು, ಆಕ್ರಮಕ ಮಹ್ಮದ್ ಷಾನ ಸೇನೆಗೆ ಬಲವಾದ ಪೆಟ್ಟು ನೀಡತೊಡಗಿತು. ಸೋತು ಸುಣ್ಣವಾದ ಮಹ್ಮದ್ ಷಾ, ಕಲ್ಬುರ್ಗಿಗೆ ಪಲಾಯನ ಮಾಡಿದ. ವಾರಂಗಲ್ ಬುಕ್ಕನ ವಶವಾಯ್ತು. ಬುಕ್ಕ ಅಲ್ಲಿನ ಕಾಕತೀಯ ರಾಜ ವಂಶಸ್ಥನೊಬ್ಬನಿಗೆ ವಾರಂಗಲ್ಲಿನ ಪಟ್ಟ ಕಟ್ಟಿ ತನ್ನ ಸಾಮಂತನನ್ನಾಗಿಸಿಕೊಂಡ.

ಬುಕ್ಕನೇನೂ ಸಾಮ್ರಾಜ್ಯದಾಹಿಯಾಗಿರಲಿಲ್ಲ. ಆದರೆ ದಕ್ಷಿಣ ಭಾರತದ ಹಿಂದೂ ರಾಜರುಗಳೆಲ್ಲರ ಒಕ್ಕೂಟ ಸಾಧಿಸುವುದೂ, ತನ್ಮೂಲಕ ದೆಹಲಿಯ ವಿದೇಶೀ ಸುಲ್ತಾನೀ ಆಕ್ರಮಣದಿಂದ ನಮ್ಮ ಸಂಸ್ಕೃತಿಯನ್ನು ರಕ್ಷಿಸುವುದೂ ಅವನ ಜೀವನದ ಧ್ಯೇಯವಾಗಿತ್ತು. ಇದಕ್ಕೆ ಅಡ್ಡ ಬಂದವರನ್ನೆಲ್ಲ ಅವನು ಚತುರೋಪಾಯಗಳ ಮೂಲಕ ನಿಗ್ರಹಿಸುತ್ತಾ ಬಂದ. ಕಂಚಿಯ ರಾಜ ಸಾಂಬವರಾಯ ಅಂಥವರಲ್ಲೊಬ್ಬನಾಗಿದ್ದ. ಆತನಿಗೆ ದೆಹಲಿ ಸುಲ್ತಾನರಿಗೆ ಮುಚುರೆಯೊಪ್ಪಿಸುತ್ತಾ ಹೇಗೋ ರಾಜ್ಯಭಾರ ನಡೆಸುವುದು ಬೇಕಾಗಿತ್ತೇ ಹೊರತು, ಬುಕ್ಕನ ದೂರದೃಷ್ಟಿ ಅರ್ಥವಾಗಿರಲಿಲ್ಲ. ಈ ಸಾಂಬವರಾಯನನ್ನು ಸರಿದಾರಿಗೆ ತಂದಿದ್ದು ಬುಕ್ಕನ ಮಗ ಚಿಕ್ಕ ಕಂಪಣ.

ದಕ್ಷಿಣಾಪಥವನ್ನು ಇಸ್ಲಾಂ ಆಡಳಿತಶಾಹಿಯಿಂದ ಹೊರತರಲು ಮಧುರೈ ಮತ್ತು ಕಂಚಿಯನ್ನು ವಿಜಯನಗರ ಸಾಮ್ರಾಜ್ಯದ ತೆಕ್ಕೆಗೆ ಸೇರಿಸಿಕೊಳ್ಳಬೇಕಾದ ಅಗತ್ಯವಿತ್ತು. ಆದರೆ ಈ ಕಾರ್ಯ ಸಾಧನೆಗಾಗಿ ಸ್ವತಃ ಬುಕ್ಕನೇ ಹೊರಡುವಂತಿರಲಿಲ್ಲ. ಏಕೆಂದರೆ ಅವನಿಂದ ಪೆಟ್ಟು ತಿಂದಿದ್ದ ಕಲ್ಬುರ್ಗಿಯ ಮಹಮದ್ ಷಾ ಹದ್ದಿನಂತೆ ವಿಜಯನಗರ ಸಾಮ್ರಾಜ್ಯದ ಮೇಲೆ ಹೊಂಚು ಹಾಕಿದ್ದ.  ಆದ್ದರಿಂದ ಮಧುರೈಯನ್ನು ಮಲ್ಲಿಕ್-ಖಾಫರನ ದಂಡನಾಯಕನಿಂದ ವಶಪಡಿಸಿಕೊಳ್ಳಲು ಮುಂದಾದ ಬುಕ್ಕನ ಈ ಕಾರ್ಯಕ್ಕೆ ಕಳಿಸಿದ್ದು ಸ್ವತಃ ತನ್ನ ಮಗ ಕಂಪಣನನ್ನು. ಅಂದು ವನವಾಸಕ್ಕೆ ಹೊರಟ ರಾಮನನ್ನು ಸೀತೆ ಹಿಂಬಾಲಿಸಿದರೆ ಇಂದು ರಣವಾಸಕ್ಕೆ ಹೊರಟ ಕಂಪಣನನ್ನು ಆತನ ಪತ್ನಿ ಗಂಗಾಂಬಿಕೆ ಹಿಂಬಾಲಿಸುತ್ತಾಳೆ. ಹೀಗೆ ಹಿಂದುತ್ವದ ಸಂರಕ್ಷಣೆಗಾಗಿ ದಕ್ಷಿಣದ ದಂಡಯಾತ್ರೆಗೆ ಹೊರಟ ಮಗ-ಸೊಸೆಯನ್ನು ಬೀಳ್ಕೊಂಡ ಪ್ರಭು ಬುಕ್ಕರಾಯ.

Click to comment

Leave a Reply

Your email address will not be published. Required fields are marked *

Most Popular

To Top