National

ಅಮಿತ್ ಶಾ; ಆಮ್ ಆದ್ಮಿಗಳನ್ನು ಉಳಿಸಲೆಂದು ತಾವು ರೋಗಕ್ಕೆ ತುತ್ತಾದರು!

ಇಡಿಯ ದೇಶ ಕೊರೋನಾ ಕಾರಣದಿಂದ ಅಸ್ತವ್ಯಸ್ತಗೊಂಡಿದೆ. ಮಾಧ್ಯಮಗಳೂ ಕೂಡ ಪ್ರತಿನಿತ್ಯ ಆಗುವ ಸಾವು-ನೋವುಗಳನ್ನು ತೋರಿಸಿ ಜನರಲ್ಲಿ ಕೊರೋನಾ ಭೀತಿ ಉಳಿಯುವಂತೆ ಮಾಡಿದ್ದಾವಾದರೂ ದೇಶ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಲವು ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮಿತಿಮೀರಿ ಸರ್ಕಾರ ಕೈಚೆಲ್ಲಿದಂತಹ ಪರಿಸ್ಥಿತಿಯೂ ಉಂಟಾಯಿತು. ಇವೆಲ್ಲವನ್ನೂ ಪ್ರತಿನಿತ್ಯ ಟಿವಿಗಳಲ್ಲಿ, ದಿನಪತ್ರಿಕೆಗಳಲ್ಲಿ ನಾವು ಗಮನಿಸಿರುತ್ತೇವೆ. ಆದರೆ, ಮಾಧ್ಯಮಗಳು ಕೆಲವೊಮ್ಮೆ ಪ್ರಮುಖ ಸುದ್ದಿಯನ್ನು ವರದಿ ಮಾಡುವುದೇ ಇಲ್ಲ.

ಹೌದು, ಈ ವರದಿ ದೆಹಲಿಯ ಕೊರೋನಾ ಪರಿಸ್ಥಿತಿಯ ಒಂದು ಚಿತ್ರಣ. ದೆಹಲಿಯಲ್ಲಿ ನಡೆದ ತಬ್ಲೀಘಿಗಳ ಕಾರ್ಯಕ್ರಮದಿಂದ ಮೊದ-ಮೊದಲು ಇಡಿಯ ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬಿದ್ದನ್ನು ನಾವೆಲ್ಲ ಗಮನಿಸಿದ್ದೇವೆ. ನೋಡ-ನೋಡುತ್ತಲೇ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿತ್ತು. ಆಸ್ಪತ್ರೆಗಳು ಕೊರೋನಾ ರೋಗಿಗಳಿಂದ ತುಂಬಿ ತುಳುಕಾಡುತ್ತಿತ್ತು. ಅಲ್ಲಿನ ಆಸ್ಪತ್ರೆಗಳಲ್ಲಿನ ಕೆಟ್ಟ ಅವಸ್ಥೆಯನ್ನು ಮಾಧ್ಯಮಗಳೂ ಬಿಚ್ಚಿಟ್ಟವು. ಸರ್ಕಾರಕ್ಕೆ ಕೊರೋನಾ ತಡೆಗಟ್ಟುವುದು ಅಸಾಧ್ಯವೇ ಸರಿ ಎಂದೆನಿಸಿತ್ತು. ಅಲ್ಲಿಯವರೆಗೂ ದೆಹಲಿಯ ಆಪ್ ಸರ್ಕಾರ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಗೆ ಒಪ್ಪಿಕೊಂಡಿರಲಿಲ್ಲ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರು ಮಾರ್ಚ್ ಕೊನೆಯವರೆಗೂ ಕೇಂದ್ರದ ಆಯುಷ್ಮಾನ್ ಭಾರತ್ ನಿಂದ ದೂರವುಳಿದು, ಅದಕ್ಕಿಂತಲೂ ದೆಹಲಿಯ ಆರೋಗ್ಯ ವ್ಯವಸ್ಥೆಯೇ ಅತ್ಯುತ್ತಮವಾಗಿದೆ ಎಂಬ ಧೋರಣೆ ತೋರುತ್ತಲೇ ಉಳಿದರು. ಜೂನ್ 2019ರಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ರಿಗೆ ಪತ್ರ ಬರೆದು, ‘ದೆಹಲಿ ಸರ್ಕಾರದ ಆರೋಗ್ಯ ವ್ಯವಸ್ಥೆ ಆಯುಷ್ಮಾನ್ ಭಾರತಕ್ಕಿಂತಲೂ ಹತ್ತು ಪಟ್ಟು ದೊಡ್ಡದಾಗಿದೆ ಮತ್ತು ಸಮಗ್ರವಾಗಿದೆ’ ಎಂದಿದ್ದರು. 2020ರ ಮಾರ್ಚ್ ಕೊನೆಯ ವೇಳೆಗೆ ಕೊರೋನಾ ಕೈ ಮೀರಿದಾಗ ಕೇಂದ್ರದ ಆಯುಷ್ಮಾನ್ ಭಾರತಕ್ಕೆ ಸಹಿ ಹಾಕಿದರು!

ಮಾರ್ಚ್ ವರೆಗೆ ತನ್ನ ಮಾನ ಉಳಿಸಿಕೊಳ್ಳಲು ಆಪ್ ಸರ್ಕಾರ ಎಲ್ಲಾ ಪ್ರಯತ್ನ ಮಾಡಿತ್ತು. ಅತ್ಯಂತ ಕಡಿಮೆ ಕೊರೋನಾ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಯ್ತು. ಕೊರೋನಾ ಸೋಂಕಿತರಿಗೆಂದು ಯಾವ ಆಸ್ಪತ್ರೆಯಲ್ಲಿ, ಎಷ್ಟು ಬೆಡ್ ಇವೆ ಎಂಬುದನ್ನು ನೋಡಲು ಫೇಕ್ ಆ್ಯಪ್ ಒಂದನ್ನು ಹೊರತರುವ ನಾಟಕವಾಡಿದರು. ಹೊರಗಿನಿಂದ ಬಂದವರು ದೆಹಲಿಯ ಆಸ್ಪತ್ರೆಗಳನ್ನು ಆವರಿಸಿಕೊಂಡುಬಿಟ್ಟಿರುವುದರಿಂದ ಆಸ್ಪತ್ರೆಗಳು ತುಂಬಿಹೋಗಿವೆ ಎಂದು ತಪ್ಪನ್ನು ಹೊರಗಿನವರ ಮೇಲೆ ಹಾಕಿದ್ದೂ ಆಯ್ತು! ಎಲ್ಲಾ ಸಾಹಸದ ನಂತರವೂ ಸರ್ಕಾರದ ಬಣ್ಣ ಬಯಲಾಗಿದ್ದು ಕೇಜ್ರಿವಾಲ್ ರ ದುರದೃಷ್ಟವೇ ಸರಿ.

ದೆಹಲಿಯ ಮುನ್ಸಿಪಾಲ್ ಕಾರ್ಪೊರೇಷನ್ ಜೂನ್ ಮಧ್ಯಭಾಗದಲ್ಲಿ ವರದಿಯೊಂದನ್ನು ನೀಡಿತು. ಅದರ ಪ್ರಕಾರ, ದೆಹಲಿಯ ಸರ್ಕಾರ ಹೇಳಿದ್ದಕ್ಕಿಂತ ಎರಡು ಪಟ್ಟು ಜನ ಅದಾಗಲೇ ಕೊರೋನಾದಿಂದ ಮೃತಪಟ್ಟಿದ್ದರು. ಜೂನ್ 13ರ ಮಾಹಿತಿಯ ಪ್ರಕಾರ, ಕೊರೋನಾ ಪರೀಕ್ಷೆ ಮಾಡಿದವರಲ್ಲಿ ಶೇಕಡಾ 37 ಪ್ರತಿಶತ ಜನ ಸೋಂಕಿತರಾಗಿದ್ದರು!


ದೆಹಲಿಯಲ್ಲಿ ಪರೀಕ್ಷೆ ಮಾಡುತ್ತಿದ್ದುದೇ ಕಡಿಮೆ, ಅಂತಹದ್ದರಲ್ಲೂ ಪರೀಕ್ಷೆಯಲ್ಲಿ ಭೇದವನ್ನು ತೋರಲಾಯ್ತು. ಎಡಪಂಥೀಯ ಚಿಂತನೆಯುಳ್ಳ ಪತ್ರಿಕೆ ‘ದಿ ಪ್ರಿಂಟ್’ ನ ವರದಿಗಳ ಆಧಾರದ ಮೇಲೆ ನೋಡುವುದಾದರೆ, ಬಡವರು ಇರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಕಡಿಮೆ ನಡೆಸಲಾಗುತ್ತಿತ್ತು ಮತ್ತು ಸಿರಿವಂತರು ವಾಸಿಸುವೆಡೆ ಹೆಚ್ಚು ಹೆಚ್ಚು ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದು ಆಮ್ ಆದ್ಮಿ ಪಕ್ಷಕ್ಕೇ ಅವಮಾನವೆನಿಸುವ ವರ್ತನೆ! ಅಷ್ಟೇ ಅಲ್ಲ, ಸಿರಿವಂತರೇ ವಾಸಿಸುವ ದಕ್ಷಿಣ ಭಾಗದ ದೆಹಲಿಯಲ್ಲಿ ಪರೀಕ್ಷೆ ನಡೆಸಿದವರಲ್ಲಿ ಶೇಕಡಾ 28 ಪ್ರತಿಶತ ಸೋಂಕಿತರು ಕಂಡುಬಂದರೆ, ಬಡವರು ವಾಸಿಸುವ ಶಹದಾರದಂತಹ ಪ್ರದೇಶಗಳಲ್ಲಿ ಶೇಕಡಾ 75 ಪ್ರತಿಶತ ಸೋಂಕಿತರಿದ್ದರು. ಇವೆಲ್ಲಾ ವರದಿಗಳಿದ್ದಾಗ್ಯೂ ದೆಹಲಿಯ ಆಪ್ ಸರ್ಕಾರ ಪರೀಕ್ಷೆಗಳನ್ನು ಹೆಚ್ಚು ನಡೆಸುತ್ತಿದ್ದುದು ದಕ್ಷಿಣ ಭಾಗದಲ್ಲಿಯೇ!

ಇನ್ನು ಮುಚ್ಚಿಡಲು ಸಾಧ್ಯವಿಲ್ಲವೆಂದಾಗ ಜೂನ್ ಮಧ್ಯಭಾಗದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ‘ಜುಲೈ 31ರ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಕೊರೋನಾ ಸೋಂಕಿತರು ಕಾಣಿಸಿಕೊಳ್ಳುತ್ತಾರೆ’ ಎಂಬ ಭಯಾನಕ ವರದಿಯನ್ನು ಜನರ ಮುಂದಿಟ್ಟರು. ಈಗ ರಾಜಧಾನಿ ದೆಹಲಿಯನ್ನು ಉಳಿಸಲೇಬೇಕಾದ ಹೊಣೆಯನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದು. ಸ್ವತಃ ಪ್ರಧಾನಮಂತ್ರಿ ನರೇಂದ್ರಮೋದಿಯವರು ಈ ಕುರಿತು ಚರ್ಚಿಸಿ ದೆಹಲಿಗೆ ಸಹಾಯವಾಗಲೆಂದು ತಂಡವೊಂದನ್ನು ಕಳಿಸಿಕೊಟ್ಟರು. ಆಗಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಜವಾಬ್ದಾರಿ ಹೊತ್ತುಕೊಂಡದ್ದು.

ಸ್ವತಃ ಅಮಿತ್ ಶಾ ಮುಂದೆ ನಿಂತು ದೆಹಲಿಯ ಆರೋಗ್ಯ ವ್ಯವಸ್ಥೆಯನ್ನು ಹಿಡಿತಕ್ಕೆ ತಂದರು. ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ ಪೌಲ್ ಅವರ ಅಧ್ಯಕ್ಷತೆಯಡಿ ಕಮಿಟಿಯೊಂದನ್ನು ಅಮಿತ್ ಶಾ ರಚಿಸಿದರು. ಇದರಲ್ಲಿ ಏಮ್ಸ್ ನ ನಿರ್ದೇಶಕರೂ, ರಾಷ್ಟ್ರೀಯ ಕೊವಿಡ್ ಟಾಸ್ಕ್ ಪೋರ್ಸ್ ನ ಸಂಶೋಧನಾ ಮುಖ್ಯಸ್ಥರೂ ಆಗಿರುವ ಡಾ. ಗುಲೇರಿಯಾ, ಕೇಂದ್ರ ಆರೋಗ್ಯ ಕಾರ್ಯದರ್ಶಿ ಪದ್ಮಿನಿ ಸಿಂಗ್ ಮುಂತಾದವರನ್ನೂ ಸೇರಿಸಲಾಯ್ತು. ಅಮಿತ್ ಶಾ ಕಾಲಿಡುತ್ತಿದ್ದಂತೆ ಪರೀಕ್ಷೆಗಳ ಸಂಖ್ಯೆ ಹೆಚ್ಚಾದವು. ಇಂಡಿಯಾ ಟುಡೇಯ ವರದಿಯ ಪ್ರಕಾರ ಜೂನ್ ಕೊನೆಯ ವೇಳೆಗೆ ಸುಮಾರು 20,000 ಕೊರೋನಾ ಪರೀಕ್ಷೆಗಳು ನಡೆಯುತ್ತಿದ್ದವು.

ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಮೊದಲಿಗಿಂತ ಹೆಚ್ಚು ವೇಗವಾಗಿ ಮತ್ತು ಸಮರ್ಥವಾಗಿ ಕಂಡು ಹಿಡಿಯಲಾಯ್ತು. ಕಂಟೈನ್ಮೆಂಟ್ ಪ್ರದೇಶಗಳನ್ನು ಮೊದಲಿಗಿಂತ ಹೆಚ್ಚು ವ್ಯವಸ್ಥಿತಗೊಳಿಸಲಾಯ್ತು. ಮನೆ-ಮನೆಗೆ ತೆರಳಿ ಸೋಂಕು ಹರಡಿರುವುದರ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಯ್ತು. ಇದಕ್ಕಾಗಿ ಕೆಲವು ಸ್ವಯಂಸೇವಾ ಸಂಸ್ಥೆಗಳನ್ನೂ, ಎನ್ ಎಸ್ ಎಸ್ ಮತ್ತು ಎನ್ ಸಿಸಿ ಕ್ಯಾಡೆಟ್ ಗಳನ್ನೂ ಜೋಡಿಸಲಾಯ್ತು.

ಜೂನ್ 14ಕ್ಕೂ ಮುನ್ನ 9,937 ಬೆಡ್ ಗಳನ್ನು ಕೊರೋನಾ ಸೋಂಕಿತರಿಗೆಂದು ದೆಹಲಿಯ ಸರ್ಕಾರ ಮೀಸಲಿಟ್ಟಿತ್ತು. ಅಮಿತ್ ಶಾ ಅವರು ಮಧ್ಯಸ್ಥಿಕೆ ವಹಿಸಿದ ನಂತರ 500 ರೈಲ್ವೇ ಕೋಚುಗಳಲ್ಲಿ 8000 ಬೆಡ್ ಗಳನ್ನೂ, ಐಟಿಬಿಪಿಯವರು ನೋಡಿಕೊಳ್ಳುವ ರಾಧಾಸೊಆಮಿ ಆಶ್ರಮದಲ್ಲಿ 10,000 ಬೆಡ್ ಗಳನ್ನೂ ಮತ್ತು ಸೈನ್ಯ ಮತ್ತು ಕೇಂದ್ರ ಪೊಲೀಸ್ ಫೋರ್ಸುಗಳ ನಿರ್ವಹಣೆಯ ಅಡಿಯಲ್ಲಿ 1000 ಬೆಡ್ ಗಳನ್ನು ಡಿ ಆರ್ ಡಿ ಒದಲ್ಲಿ ತೆರೆಯಲಾಯ್ತು. ಆಪ್ ಸರ್ಕಾರ ಕೂಡ ಕೇಂದ್ರದಿಂದ ಪ್ರೇರಣೆ ಹೊಂದಿ 500 ಬೆಡ್ ಗಳನ್ನು ಕಾಮನ್ವೆಲ್ತ್ ಗೇಮ್ಸ್ ಹಳ್ಳಿಗಳಲ್ಲಿ ತೆರೆಯಿತು. ಕಮಿಟಿ ನೀಡಿದ ವರದಿಯ ಆಧಾರದ ಮೇಲೆ ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸಲಾಯ್ತು. ಸ್ವತಃ ಕೇಂದ್ರ ಗೃಹಸಚಿವರು ಪಿಪಿಇ ಕಿಟ್, ವೆಂಟಿಲೇಟರ್, ಆಕ್ಸಿ ಮೀಟರ್ ಗಳನ್ನು ಹೆಚ್ಚು ಪೂರೈಕೆ ಮಾಡಿದರು.

ಪ್ರತಿ ಕೊವಿಡ್ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಗಮನವಹಿಸುವ ಸಲುವಾಗಿ ಸಿಸಿಟಿವಿಗಳನ್ನು ಅಳವಡಿಸಲಾಯ್ತು. ಅಷ್ಟೇ ಅಲ್ಲದೇ, ಆಸ್ಪತ್ರೆಗಳಲ್ಲಿ ಎಲೆಕ್ಟ್ರಾನಿಕ್ ಡಿಸ್ಪ್ಲೆ ಬೋರ್ಡುಗಳನ್ನು ಅಳವಡಿಸಿ ಪ್ರತಿ ಕ್ಷಣದ ವರದಿಯನ್ನು ಅದರಲ್ಲಿ ಹಾಕುವಂತೆ ಸೂಚಿಸಲಾಯ್ತು. ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ, ಯಾವುದೇ ಸಮಸ್ಯೆಗಳಿಲ್ಲದೇ ಮಾಡಲಾಯ್ತು.

ಅಮಿತ್ ಶಾ ಮತ್ತು ತಂಡ ಆರೋಗ್ಯ ವ್ಯವಸ್ಥೆಯಲ್ಲಿ ಈ ಎಲ್ಲ ಸುಧಾರಣೆಗಳನ್ನು ತಂದ ನಂತರ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯೂ ಇಳಿಮುಖವಾಗುವುದನ್ನು ಇಂಡಿಯಾ ಟುಡೇ ವರದಿ ಮಾಡಿದೆ!

ದೆಹಲಿಯಲ್ಲಿ ಜುಲೈ 31ರ ವೇಳೆಗೆ 5.5 ಲಕ್ಷ ಜನ ಕೊರೋನಾ ಸೋಂಕಿತರಾಗಲಿದ್ದಾರೆ ಎಂಬ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಮಾತನ್ನು ಸುಳ್ಳು ಮಾಡಿದರು ಅಮಿತ್ ಶಾ. ಕೈಮೀರಿ ಹೋಗಿದ್ದ ರಾಜಧಾನಿಯ ಕೊರೋನಾ ಪರಿಸ್ಥಿತಿಯನ್ನು ಕೆಲವೇ ದಿನಗಳಲ್ಲಿ ಹತೋಟಿಗೆ ತರುವಲ್ಲಿ ಅಮಿತ್ ಶಾ ಮತ್ತು ತಂಡ ಯಶಸ್ವಿಯಾಯ್ತು. ಇಷ್ಟೆಲ್ಲಾ ಕಾರ್ಯ ನಿರ್ವಹಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾರಿಗೆ ಈಗ ಕೊರೋನಾ ಸೋಂಕು ದೃಢಪಟ್ಟಿದೆ! ಅವರು ಶೀಘ್ರ ಗುಣಮುಖರಾಗಿ ಮತ್ತಷ್ಟು ರಾಜ್ಯಗಳ ಕೊರೋನಾ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಲಿ ಎಂಬುದಷ್ಟೇ ಪ್ರಾರ್ಥನೆ..

-ಪ್ರಿಯಾ ಶಿವಮೊಗ್ಗ

Click to comment

Leave a Reply

Your email address will not be published. Required fields are marked *

Most Popular

To Top